ನಂಜನಗೂಡು, ಫೆಬ್ರವರಿ 7, 2026 :ತಾಲ್ಲೂಕಿನ ಹನುಮನಪುರ ಗೇಟ್ ಬಳಿ ದ್ವಿಚಕ್ರ ವಾಹನ ಮತ್ತು ಗೊಬ್ಬರದ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೈಸೂರಿನ ಜೆ.ಪಿ. ನಗರದ ನಿವಾಸಿ ಚಂದ್ರು (38) ಹಾಗೂ ನಡುಕಲು ಮೊಳೆ ಗ್ರಾಮದ ಶೀಲಾ (35) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಕಾರ್ಯ ಗ್ರಾಮದ ಕಡೆಯಿಂದ ಸ್ಕೂಟರ್‌ನಲ್ಲಿ ಸಂತೇಮರಹಳ್ಳಿ ಕಡೆಗೆ ತೆರಳುತ್ತಿದ್ದ ಚಂದ್ರು ಮತ್ತು ಶೀಲಾ ಅವರು ಹನುಮನಪುರ ಗೇಟ್ ಬಳಿ ತಿರುವು ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಚುಂಚನಹಳ್ಳಿ ಕಡೆಗೆ ಹೋಗುತ್ತಿದ್ದ ಗೊಬ್ಬರ ತುಂಬಿದ ಲಾರಿಗೆ ಸ್ಕೂಟರ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಚಂದ್ರು ಮತ್ತು ಹಿಂಬದಿ ಸವಾರೆ ಶೀಲಾ ಇಬ್ಬರೂ ರಸ್ತೆಗೆ ಬಿದ್ದಿದ್ದು, ಲಾರಿಯ ಚಕ್ರಗಳು ಅವರ ಮೇಲೆ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಘು, ಸಿಪಿಐ ಚಂದ್ರಶೇಖರ್, ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐಗಳಾದ ಬಸವರಾಜು ಹಾಗೂ ಎಸ್.ಬಿ. ರಮೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಸಂಬಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
