ಮೈಸೂರು, ಮಾರ್ಚ್ 5, 2026: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳೆ ತಮ್ಮ ವೃತ್ತಿಜೀವನದ ದಾಖಲೆಯ 17ನೇ ಬಜೆಟ್ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ, ಅವರ ಅಭಿಮಾನಿಗಳು ಮೈಸೂರಿನಲ್ಲಿ ವಿಶೇಷವಾಗಿ ಶುಭ ಕೋರಿದ್ದಾರೆ.
ನಗರದ ಐತಿಹಾಸಿಕ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಮುಖ್ಯಮಂತ್ರಿಗಳ ಬೃಹತ್ ಭಾವಚಿತ್ರವನ್ನು ರಂಗೋಲಿಯಲ್ಲಿ ಬಿಡಿಸುವ ಮೂಲಕ ಅಭಿಮಾನ ಮೆರೆಯಲಾಗಿದೆ.

ಕಲಾವಿದ ಪುನೀತ್ ಮತ್ತು ತಂಡದವರು ಸತತ 10 ಗಂಟೆಗಳ ಕಾಲ ಶ್ರಮಿಸಿ ಈ ಬೃಹತ್ ರಂಗೋಲಿ ಚಿತ್ರವನ್ನು ರಚಿಸಿದ್ದಾರೆ. ಸುಮಾರು 8 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮೂಡಿಬಂದಿರುವ ಈ ಚಿತ್ರವು 125 ಅಡಿ ಉದ್ದ ಹಾಗೂ 65 ಅಡಿ ಅಗಲವನ್ನು ಹೊಂದಿದೆ. ಕೇವಲ ರಂಗೋಲಿ ಪುಡಿಯನ್ನು ಬಳಸಿಯೇ ಸಿದ್ದರಾಮಯ್ಯನವರ ಕಲಾಕೃತಿಯನ್ನು ಅತ್ಯಂತ ಆಕರ್ಷಕವಾಗಿ ಬಿಡಿಸಲಾಗಿದೆ.
ಈ ಕಾರ್ಯಕ್ಕೆ ಯತೀಂದ್ರ ಯುವ ಬ್ರಿಗೇಡ್ ಹಾಗೂ ಭುವನ್ ರಾಜ್ ಫೌಂಡೇಶನ್ ಸಹಕಾರ ನೀಡಿದ್ದು, ಕಲಾವಿದರಾದ ಲಕ್ಷ್ಮಿ ಸಿ, ರವಿಚಂದ್ರನ್ ಮತ್ತು ಸಂಜಯ್ ಅವರು ಸಾಥ್ ನೀಡಿದ್ದಾರೆ. ಬಜೆಟ್ ಮಂಡನೆಯ ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ಸಿಎಂ ಅಭಿಮಾನಿಗಳು ಹಮ್ಮಿಕೊಂಡಿದ್ದ ಈ ವಿಭಿನ್ನ ಪ್ರಯತ್ನ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
