ನಂಜನಗೂಡು, ಮಾರ್ಚ್ 30, 2026 : ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ನಂಜನಗೂಡಿನಲ್ಲಿ ಇಂದು ಗೌತಮ ಪಂಚ ಮಹಾ ರಥೋತ್ಸವವು ಅತ್ಯಂತ ವೈಭವದಿಂದ ಜರುಗಿತು. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಾಜ್ಯದ ವಿವಿಧ ಮೂಲೆಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು.
ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ವಿಶೇಷ ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ ಬಳಿಕ, ಮಂಗಳ ವಾದ್ಯಗಳ ನಡುವೆ ರಥೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಸರ್ವಾಲಂಕೃತಗೊಂಡಿದ್ದ ಶ್ರೀ ಕಂಠೇಶ್ವರಸ್ವಾಮಿ, ಪಾರ್ವತಿ, ಗಣೇಶ, ಸುಬ್ರಮಣ್ಯ ಸ್ವಾಮಿ ಹಾಗೂ ಚಂಡಿಕೇಶ್ವರ ಸ್ವಾಮಿಯ ಐದು ರಥಗಳು ನಂಜನಗೂಡಿನ ಪ್ರಮುಖ ರಥ ಬೀದಿಗಳಲ್ಲಿ ಸಾಗಿದವು. ಭಕ್ತರು ಜಯಘೋಷಗಳನ್ನು ಕೂಗುತ್ತಾ, ರಥಕ್ಕೆ ಹಣ್ಣು-ಜವನ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ದರ್ಶನ್ ಧ್ರುವ ನಾರಾಯಣ್, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಹಲವು ಗಣ್ಯರು ಭಾಗವಹಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಪಂಚ ರಥಗಳ ಸಂಚಾರದಿಂದಾಗಿ ಇಡೀ ನಂಜನಗೂಡು ಪಟ್ಟಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
