ಚಾಮರಾಜನಗರ, ಜನವರಿ 21, 2026 : ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕನೋರ್ವ ಚಿರತೆ ದಾಳಿಗೆ ಬಲಿಯಾಗಿರುವ ಘಟನೆ ಬೆಟ್ಟದ ತಪ್ಪಲಾದ ತಾಳುಬೆಟ್ಟದಲ್ಲಿ ಮುಂಜಾನೆ ನಡೆದಿದ್ದು ಇಂದು ಬೆಳಗ್ಗೆ 11 ರ ಸುಮಾರಿಗೆ ಶವಪತ್ತೆಯಾಗಿದೆ.
ಮಂಡ್ಯ ಜಿಲ್ಲೆಯ ಚಿರನಹಳ್ಳಿ ಗ್ರಾಮದ ಪ್ರವೀಣ್{30} ಎಂಬುವವರು ಚಿರತೆ ದಾಳಿಗೆ ಮೃತಪಟ್ಟಿರುವ ಪಾದಯಾತ್ರಿಕ. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಮಂಡ್ಯ ಜಿಲ್ಲೆಯ ಚಿರನಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಪಾದಯಾತ್ರಿಗಳು ತೆರಳಿದ್ದರು. ಮಂಗಳವಾರ ರಾತ್ರಿ ತಾಳುಬೆಟ್ಟದಲ್ಲಿ ವಾಸ್ತವ್ಯ ಹೂಡಿ ಬುಧವಾರ ಬೆಳಗ್ಗೆ ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಹೊರಟಿದ್ದರು. ಬುಧವಾರ ಬೆಳಗ್ಗೆ ರಂಗಸ್ವಾಮಿ ಒಡ್ಡಿನ ಸಮೀಪದ ಪಾದಯಾತ್ರಿಕರ ಮಾರ್ಗದಲ್ಲಿ ಕುಳಿತಿದ್ದ ಚಿರತೆಯು ಏಕಾಏಕಿ ಪ್ರವೀಣ್ ಮೇಲೆ ದಾಳಿ ಮಾಡಿ ಎಳೆದೊಯ್ದಿದೆ. ಜೊತೆಯಲ್ಲಿದ್ದ ಐವರು ಸ್ನೇಹಿತರು ಕಿರುಚಾಡಿಕೊಂಡು ಚಿರತೆ ಓಡಿಸಲು ಎಷ್ಟೇ ಪ್ರಯತ್ನ ಪಟ್ಟರು ಪ್ರವೀಣ್ ನನ್ನು ಅರಣ್ಯದೊಳಗೆ ಎಳೆದುದೊಯ್ದಿದೆ.
ಭಯಭೀತರಾದ ಸ್ನೇಹಿತರು ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ರಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಶವವನ್ನು ಪತ್ತೆ ಹಚ್ಚಿದ್ದಾರೆ. ಕಳೆದ ಒಂದು ವಾರದಿಂದ ಸತತವಾಗಿ ರಸ್ತೆ ಬದಿಯಲ್ಲಿಯೇ ಚಿರತೆ ಕಾಣಿಸಿಕೊಂಡು ಕುಳಿತಿರುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿತ್ತು.
