ಮೈಸೂರು, ಜನವರಿ 8, 2026 : ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಪ್ರೀತಿಯ ಹೆಸರಿನಲ್ಲಿ ಯುವಕನೊಬ್ಬ ನೀಡುತ್ತಿದ್ದ ಕಿರುಕುಳಕ್ಕೆ ಮನನೊಂದು ಅಪ್ರಾಪ್ತ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ.
ನಂಜನಗೂಡು ಪಟ್ಟಣದ ನೀಲಕಂಠ ನಗರದ ನಿವಾಸಿ, 17 ವರ್ಷದ ದಿವ್ಯ ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ನಂಜನಗೂಡಿನ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಅದೇ ಭಾಗದ ದೇಬೂರು ಗ್ರಾಮದ ಆದಿತ್ಯ ಎಂಬ ಯುವಕ ದಿವ್ಯಳನ್ನು ಪ್ರೀತಿಸುವಂತೆ ಸತತವಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.
ಪೋಷಕರ ಮನವಿಗೂ ಬೆಲೆ ಕೊಡದ ಯುವಕ: ಯುವಕನ ಕಿರುಕುಳದ ಬಗ್ಗೆ ದಿವ್ಯ ತನ್ನ ಪೋಷಕರಿಗೆ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ದಿವ್ಯಳ ತಂದೆ ಗುರುಮೂರ್ತಿ ಅವರು ಆದಿತ್ಯನನ್ನು ಕರೆದು ಬುದ್ಧಿಮಾತು ಹೇಳಿ, ಮಗಳಿಗೆ ತೊಂದರೆ ನೀಡದಂತೆ ಎಚ್ಚರಿಸಿದ್ದರು. ಆದರೂ ತನ್ನ ಚಾಳಿ ಮುಂದುವರಿಸಿದ್ದ ಆದಿತ್ಯ, ದಿವ್ಯಳಿಗೆ ಮಾನಸಿಕ ಹಿಂಸೆ ನೀಡುವುದನ್ನು ನಿಲ್ಲಿಸಿರಲಿಲ್ಲ. ಇದರಿಂದ ತೀವ್ರವಾಗಿ ನೊಂದ ದಿವ್ಯ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ.
ಮಗಳ ಸಾವಿನಿಂದ ಕಂಗೆಟ್ಟ ತಂದೆ ಗುರುಮೂರ್ತಿ ಅವರು ಆದಿತ್ಯನ ವಿರುದ್ಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
