ಬೆಂಗಳೂರು, ಏಪ್ರಿಲ್ 28, 2026 : ರಾಜಧಾನಿಯ ನಂದಿನಿ ಲೇಔಟ್‌ನಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಪ್ಲಾಸ್ಟಿಕ್ ಗೋಡೌನ್‌ವೊಂದು ಸಂಪೂರ್ಣ ಭಸ್ಮವಾಗಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದ ಲೇಡಿಸ್ ಪಿಜಿಗೂ ಹಬ್ಬಿದ ಪರಿಣಾಮ ಯುವತಿಯರು ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ನಂದಿನಿ ಲೇಔಟ್ ವ್ಯಾಪ್ತಿಯ ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ, ಪ್ಲಾಸ್ಟಿಕ್ ವಸ್ತುಗಳಿದ್ದ ಕಾರಣ ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಮನೆಗಳಿಗೆ ವ್ಯಾಪಿಸಿದ್ದಲ್ಲದೆ ಬೆಂಕಿಯ ತೀವ್ರತೆಗೆ ಮನೆಯ ಮುಂಭಾಗದ ಮರಗಳು ಹಾಗೂ ಕಬ್ಬಿಣದ ಗೇಟ್‌ಗಳು ಕೂಡ ಹೊತ್ತಿ ಉರಿದಿವೆ.
ಗೋಡೌನ್ ಪಕ್ಕದಲ್ಲೇ ಸುಮಾರು 50 ಯುವತಿಯರು ವಾಸವಿದ್ದ ಲೇಡಿಸ್ ಪಿಜಿ ಇದ್ದು, ಬೆಂಕಿಯ ಕೆನ್ನಾಲಿಗೆ ಮತ್ತು ದಟ್ಟ ಹೊಗೆ ಪಿಜಿಯ ಒಳಗೂ ಆವರಿಸುತ್ತಿದ್ದಂತೆ ಯುವತಿಯರು ತೀವ್ರ ಗಾಬರಿಗೊಂಡಿದ್ದಾರೆ. ಹೊರಗೆ ಬರಲು ದಾರಿಯಿಲ್ಲದೆ ಆತಂಕಗೊಂಡ ಕೆಲ ಯುವತಿಯರು ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿದರೆ, ಇನ್ನೂ ಕೆಲವರು ಪ್ರಾಣ ಉಳಿಸಿಕೊಳ್ಳಲು ಪಿಜಿಯ ಕಾಂಪೌಂಡ್ ಗೋಡೆ ಹಾರಿ ಹೇಗೋ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ.
