ಮೈಸೂರು, ಏಪ್ರಿಲ್ 18, 2026 : ಮೈಸೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶಿವಕುಮಾರ್ ಅವರು ಸಂಸತ್ತಿನಲ್ಲಿ ನಾರಿ ಶಕ್ತಿ ಮಸೂದೆ ವಿಫಲವಾಗಿರುವುದನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ.
ಈ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಿದ ಅವರು, ಕೇಂದ್ರ ಸರ್ಕಾರವು ಅತ್ಯಂತ ತರಾತುರಿಯಲ್ಲಿ ಈ ಬಿಲ್ ಮಂಡಿಸಿತ್ತು ಎಂದು ಅಭಿಪ್ರಾಯಪಟ್ಟರು. ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲ, ಆದರೆ ಪ್ರಸ್ತುತ ರೂಪದಲ್ಲಿರುವ ಮಸೂದೆಯು ಕೇವಲ ರಾಜಕೀಯ ಪಕ್ಷಗಳಲ್ಲಿರುವ ಪ್ರಭಾವಿ ಮತ್ತು ಉಳ್ಳವರಿಗೆ ಮಾತ್ರ ಅನುಕೂಲ ಮಾಡಿಕೊಡುವಂತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮಹಿಳಾ ರಾಜಕೀಯ ಮೀಸಲಾತಿಯಲ್ಲಿ ಶೋಷಿತ ವರ್ಗದವರು ಹಾಗೂ ಒಬಿಸಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕಾದ ಅಗತ್ಯವಿತ್ತು, ಆದರೆ ಅಂತಹ ಯಾವುದೇ ಅಂಶಗಳು ಈ ಬಿಲ್‌ನಲ್ಲಿ ಇಲ್ಲದ ಕಾರಣ ಇದು ಸೋಲನ್ನು ಅನುಭವಿಸಿದೆ ಎಂದು ಅವರು ವಿಶ್ಲೇಷಿಸಿದರು. ಎಲ್ಲಾ ಸಮುದಾಯದ ಹೆಣ್ಣು ಮಕ್ಕಳು ರಾಜಕೀಯ ಮುಖ್ಯವಾಹಿನಿಗೆ ಬರಬೇಕೆಂಬುದು ನಮ್ಮ ಆಶಯವಾಗಿದೆ. ಇದರೊಂದಿಗೆ ಕ್ಷೇತ್ರ ಪುನರ್ ವಿಂಗಡಣೆಯ ಪ್ರಕ್ರಿಯೆಯಲ್ಲಿ ದಕ್ಷಿಣ ಭಾರತಕ್ಕೆ ಆಗುತ್ತಿದ್ದ ಅನ್ಯಾಯದ ಬಗ್ಗೆಯೂ ಅವರು ಧ್ವನಿ ಎತ್ತಿದರು.
ಮಸೂದೆಯನ್ನು ವಿರೋಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸ್ಟಾಲಿನ್ ಹಾಗೂ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದ ಅರ್ಪಿಸಿದ ಶಿವಕುಮಾರ್ ಅವರು, ದೇಶದಲ್ಲಿ ಜನಗಣತಿ ಪೂರ್ಣಗೊಂಡ ನಂತರ ಜಾತಿಗನುಗುಣವಾಗಿ ಮಹಿಳಾ ರಾಜಕೀಯ ಮೀಸಲಾತಿ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು. ಈ ಬಿಲ್ ವಿರೋಧಿಸಿದ ಎಲ್ಲಾ ರಾಷ್ಟ್ರೀಯ ನಾಯಕರನ್ನು ಅವರು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.
