ಮೈಸೂರು, ಏಪ್ರಿಲ್ 17, 2026: ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಐತಿಹಾಸಿಕ ‘ನಾರಿ ಶಕ್ತಿ’ ಯೋಜನೆಯ ಮಸೂದೆಯನ್ನು ಮಂಡಿಸಿರುವುದನ್ನು ಸ್ವಾಗತಿಸಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಿಳೆಯರು ಅದ್ಧೂರಿಯಾಗಿ ಸಂಭ್ರಮಿಸಿದರು.

ಬಿಜೆಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ತಮ್ಮ ಸಂತಸವನ್ನು ಹಂಚಿಕೊಂಡರು.
ನಗರದ ಪ್ರಮುಖ ಕೇಂದ್ರವಾದ ರಾಮಸ್ವಾಮಿ ವೃತ್ತದಿಂದ ಆರಂಭಗೊಂಡ ಬೈಕ್ ರ್ಯಾಲಿಗೆ ಅಧಿಕೃತ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕೇಸರಿ ಧ್ವಜಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಸಾಗಿದ ಮಹಿಳೆಯರು ಇಡೀ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದರು. ಬೈಕ್ ರ್ಯಾಲಿಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಸಾರ್ವಜನಿಕರ ಗಮನ ಸೆಳೆಯಿತು.
ಮಹಿಳೆಯರಿಗೆ ರಾಜಕೀಯವಾಗಿ ಹೆಚ್ಚಿನ ಶಕ್ತಿ ತುಂಬುವ ಉದ್ದೇಶದ ಈ ಮಸೂದೆಯನ್ನು ಮಂಡಿಸಲು ಮುಂದಾದ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಮಹಿಳಾ ಮೋರ್ಚಾದ ಮುಖಂಡರು ಮುಕ್ತಕಂಠದಿಂದ ಶ್ಲಾಘಿಸಿದರು. ದೇಶದ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಲಿದ್ದು, ಮಹಿಳೆಯರ ಸಬಲೀಕರಣಕ್ಕೆ ಹೊಸ ಆಯಾಮ ನೀಡಲಿದೆ ಎಂದು ಧನ್ಯವಾದ ಅರ್ಪಿಸಿದರು. ಸಂಭ್ರಮಾಚರಣೆಯುದ್ದಕ್ಕೂ ಮಹಿಳೆಯರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
