ಮೈಸೂರು, ಏಪ್ರಿಲ್ 11, 2026 : ಗ್ರೀನ್ ಬಡ್ಸ್ ಸಂಸ್ಥೆಯಿಂದ ವಂಚನೆಗೆ ಒಳಗಾಗಿರುವ ಠೇವಣಿದಾರರಿಗೆ ಕೂಡಲೇ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮೈಸೂರಿನ ಗನ್ ಹೌಸ್ ಬಳಿಯಿರುವ ಕುವೆಂಪು ಉದ್ಯಾನವನದಲ್ಲಿ ವಂಚನೆಗೆ ಒಳಗಾದ ನೂರಾರು ಠೇವಣಿದಾರರ ಸಭೆ ನಡೆಸಿದ ಅವರು, ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕುರುಬೂರು ಶಾಂತಕುಮಾರ್, ಗ್ರೀನ್ ಬಡ್ಸ್ ಸಂಸ್ಥೆಯು ಸಾರ್ವಜನಿಕರಿಂದ ಸುಮಾರು 150 ರಿಂದ 180 ಕೋಟಿ ರೂಪಾಯಿ ಹಣ ಸಂಗ್ರಹಿಸಿ ವಂಚನೆ ಮಾಡಿದೆ. ಈ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ಸಕ್ಷಮ ಪ್ರಾಧಿಕಾರ ರಚಿಸಿ, ಸಂಸ್ಥೆಗೆ ಸೇರಿದ 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಮುಗಿದಿದ್ದರೂ ಸಹ, ಹಣ ಕಳೆದುಕೊಂಡ ಬಡ ಠೇವಣಿದಾರರಿಗೆ ಮಾತ್ರ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂತ್ರಸ್ತರ ಬಾಕಿ ಹಣವನ್ನು ವಾಪಸ್ ಕೊಡಿಸಲು ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಖಂಡಿಸಿದ ಅವರು, ಈ ತಿಂಗಳ ಅಂತ್ಯದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ವಂಚಿತ ಠೇವಣಿದಾರರು ಭಾಗವಹಿಸಿ ತಮ್ಮ ಅಳಲು ತೋಡಿಕೊಂಡರು.
