ಮೈಸೂರು, ಏಪ್ರಿಲ್ 11, 2026 : ಚಾಮುಂಡಿ ಬೆಟ್ಟದಲ್ಲಿ ಕೈಗೆತ್ತಿಕೊಂಡಿದ್ದ ‘ಪ್ರಸಾದ್’ ಯೋಜನೆಯ ಕಾಮಗಾರಿಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಹಿರಿಯ ಪರಿಸರ ಹೋರಾಟಗಾರ ಪರಶುರಾಮೇಗೌಡ ಸ್ವಾಗತಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಯೋಜನೆಯಿಂದ ಬೆಟ್ಟದ ಪರಿಸರಕ್ಕೆ ಧಕ್ಕೆ ಬರುತ್ತದೆ ಎಂದು ನಾವು ಮೊದಲೇ ಹೋರಾಟ ಮಾಡಿದ್ದೆವು. ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಕೂಡ ಈ ಬಗ್ಗೆ ಪತ್ರ ಬರೆದಿದ್ದರು, ಆದರೂ ಕಾಮಗಾರಿ ಆರಂಭಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಿಗಳು ಕಮಿಷನ್ ಆಸೆಗೆ ಅಥವಾ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿದ್ದಾರೆಯೇ ಎಂಬ ಬಗ್ಗೆ ಜಿಲ್ಲಾಧಿಕಾರಿಗಳು ಸಾರ್ವಜನಿಕವಾಗಿ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಚಾಮುಂಡಿಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿಯವರು ಜನಪ್ರತಿನಿಧಿಗಳಿಗೂ ಗೌರವ ನೀಡುತ್ತಿಲ್ಲ ಮತ್ತು ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ. ಹುಂಡಿ ಹಣದ ಸಂಗ್ರಹದ ಬಗ್ಗೆಯೂ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಸಂಸದ ಯದುವೀರ್ ಒಡೆಯರ್ ಅವರೇ ಅಧಿಕಾರಿಗಳ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವುದನ್ನು ನೆನಪಿಸಿದರು. ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ವಲಯ ಮಾಡುವ ಘೋಷಣೆ ಕೇವಲ ಕಾಗದದ ಮೇಲೆ ಉಳಿದಿದೆ ಎಂದು ಕಿಡಿಕಾರಿದರು.
ಇದೇ ವೇಳೆ ವನ್ಯಜೀವಿಗಳ ಸಂತಾನಹರಣ ಮಾಡುವ ಸರ್ಕಾರದ ಆಲೋಚನೆಯನ್ನು ತೀವ್ರವಾಗಿ ಖಂಡಿಸಿದ ಪರಶುರಾಮೇಗೌಡರು, ಇಂತಹ ಆಲೋಚನೆ ಮಾಡಿರುವುದೇ ದುರದೃಷ್ಟಕರ. ಮೊದಲು ಭ್ರಷ್ಟ ಮತ್ತು ದುಷ್ಟ ರಾಜಕಾರಣಿಗಳಿಗೆ ಸಂತಾನಹರಣ ಮಾಡಲಿ, ಆ ಮೂಲಕ ಭ್ರಷ್ಟಾಚಾರ ನಿರ್ಮೂಲನೆಯಾಗಲಿ ಎಂದು ಆಕ್ರೋಶ ಹೊರಹಾಕಿದರು. ರಾಜ್ಯ ಸರ್ಕಾರ ತಕ್ಷಣವೇ ಇಂತಹ ಅವೈಜ್ಞಾನಿಕ ಆಲೋಚನೆಗಳಿಂದ ಹಿಂದೆ ಸರಿಯಬೇಕು ಎಂದು ಅವರು ಎಚ್ಚರಿಸಿದ್ದಾರೆ.
