ಬೆಂಗಳೂರು, ಏಪ್ರಿಲ್ 7, 2026 : ಏ.9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆಗೆ ಬಹಿರಂಗ ಪ್ರಚಾರ ಇವತ್ತು ಅಂತ್ಯಗೊಳ್ಳಲಿದೆ. ಸಂಜೆ 5 ಗಂಟೆಗೆ ಅಬ್ಬರದ ಪ್ರಚಾರಕ್ಕೆ ತೆರೆಬೀಳಲಿದೆ.
ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಎರಡೂ ಪಕ್ಷಗಳ ನಾಯಕರು ಮತದಾರರ ಮನವೊಲಿಸಲು ಅಂತಿಮ ಕಸರತ್ತು ನಡೆಸುತ್ತಿದ್ದಾರೆ. ಬುಧವಾರ ಸಂಜೆಯವರೆಗೂ ಮನೆಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ.
ಕಾಂಗ್ರೆಸ್‌ನ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ದಾವಣಗೆರೆ ದಕ್ಷಿಣಕ್ಕೆ, ಎಚ್.ವೈ.ಮೇಟಿಯವರ ನಿಧನದಿಂದ ಬಾಗಲಕೋಟೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಎರಡೂ ಕ್ಷೇತ್ರಗಳು ಆಡಳಿತಾರೂಢ ಕಾಂಗ್ರೆಸ್‌ನಿಂದ ತೆರವಾಗಿವೆ. ಹೀಗಾಗಿ ಎರಡೂ ಕ್ಷೇತ್ರಗಳನ್ನು ಮತ್ತೊಮ್ಮೆ ಗೆದ್ದು ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳುವುದು ಸಿಎಂ ಸಿದ್ದರಾಮಯ್ಯಗೆ ಪ್ರತಿಷ್ಠೆಯ ವಿಷಯವಾಗಿದೆ.
2008 ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ನಂತರ ಹುಟ್ಟಿಕೊಂಡಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ, ಸತತ ನಾಲ್ಕು ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸುತ್ತಾ ಬಂದಿದ್ದರು. ಈಗ ಪರಿಸ್ಥಿತಿ ಭಿನ್ನಾವಾಗಿದ್ದು ಕಾಂಗ್ರೆಸ್ ನ ಎಲ್ಲಾ ನಾಯಕರು ಅಲ್ಲಿಯೇ ಬೀಡುಬಿಟ್ಟು ಭರ್ಜರಿ ಪ್ರಚಾರ ನಡೆಸಿದ್ದಾರೆ.
ಇನ್ನು, ಬಾಗಲಕೋಟೆಯಲ್ಲಿ ಹೆಚ್.ವೈ. ಮೇಟಿಯವರು ಅಕಾಲಿಕ ನಿಧನರಾದ ಕಾರಣದಿಂದ ಅವರ ಪುತ್ರ ಉಮೇಶ್ ಮೇಟಿ ಯವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಉಮೇಶ್ ಮೇಟಿ ಅವರನ್ನು ಗೆಲ್ಲಿಸುವಂತೆ ಈಗಾಗಲೇ ಕೈ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದು, ಎರಡೂ ಕ್ಷೇತದಲ್ಲೂ ಚುನಾವಣೆ ಕಾವು ಜೋರಿದೆ.
