ನಂಜನಗೂಡು, ಮಾರ್ಚ್ 27, 2026 : ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗೌತಮ ಪಂಚ ಮಹಾರಥೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.
ನಂಜನಗೂಡಿನ ಇತಿಹಾಸ ಪ್ರಸಿದ್ಧ ಶ್ರೀ ನಂಜುಂಡೇಶ್ವರಸ್ವಾಮಿಯ ದೊಡ್ಡಜಾತ್ರೆಯ ಅಂಗವಾಗಿ ಮಾ.30 ರಂದು ಸೋಮವಾರ ಮುಂಜಾನೆ ಶ್ರೀ ಗೌತಮ ಪಂಚಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಲು ಸಕಲ ಸಿದ್ಧತೆಗಳು ಸಾಗಿದೆ.

ಅಂದು ಸೋಮವಾರ ಬೆಳಗ್ಗೆ 5:50 ರಿಂದ 6-30 ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀ ಮನ್ನಹಾಗೌತಮ ರಥಾರೋಹಣ ನೆರವೇರಲಿದ್ದು, ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಮಾ.27 ರಂದು ಶುಕ್ರವಾರ ಸಂಜೆ 7 ಗಂಟೆಗೆ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರೀಕಂಠ ಮುಡಿ ಉತ್ಸವ, ಜಾತ್ರೆಯ ಪ್ರಮುಖ ಮತ್ತೊಂದು ಆಕರ್ಷಣೆಯಾದ ತೆಪ್ಪೋತ್ಸವ ಏ.01 ರಂದು ಬುಧವಾರ ಶುಕ್ರವಾರ ರಂದು ರಾತ್ರಿ 7 ಗಂಟೆಗೆ ಕಪಿಲಾ ನದಿಯಲ್ಲಿ ನಡೆಯಲಿದ್ದು, ತೆಪ್ಪೋತ್ಸವದಲ್ಲೂ ಸಾವಿರಾರು ಜನರು ಭಾಗವಹಿಸಲಿದ್ದಾರೆ.
ಗೌತಮ ರಥದ ಆಕರ್ಷಣೆ
ಶ್ರೀಕಂಠೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಜರುಗುವ ದೊಡ್ಡಜಾತ್ರೆಯ ರಥೋತ್ಸವದಲ್ಲಿ ಗಣಪತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ, ಪಾರ್ವತಿ ಹಾಗೂ ಶ್ರೀಕಂಠೇಶ್ವರಸ್ವಾಮಿ ಅವರು ಆಸೀನರಾಗಿರುವ 5 ಅಲಂಕೃತ ರಥಗಳು ಮೆರವಣಿಗೆಯಲ್ಲಿ ಸಾಗುತ್ತವೆ. ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ಶ್ರೀಕಂಠೇಶ್ವರಸ್ವಾಮಿ ಆಸೀನರಾಗುವ ಗೌತಮ ರಥ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಸುಮಾರು 10 ವ್ಯಾಸದ ಬೃಹತ್ ಚಕ್ರಗಳನ್ನು ನೆಲದಿಂದ ಸುಮಾರು 90 ಅಡಿ ಎತ್ತರದ ಬೃಹತ್ ರಥ ಅಂದಾಜು 110 ಟನ್ ತೂಕವನ್ನು ಹೊಂದಿದೆ. ಗೌತಮ ರಥದ ಉತ್ಸವ ಮಂಟಪ ವಿಶಿಷ್ಟ ಕಲಾ ಕೆತ್ತನೆಯಿಂದ ಕೂಡಿದ್ದು, ಜಾತ್ರೆ ಸಂದರ್ಭ ನಾನಾ ಬಣ್ಣಗಳ ವಸ್ತ್ರಗಳು, ವಿವಿಧ ಬಗೆಯ ಪುಷ್ಪಗಳು ಹಾಗೂ ಬಣ್ಣದ ಧ್ವಜಗಳನ್ನು ರಥಕ್ಕೆ ಕಟ್ಟಿ ಸಿಂಗರಿಸಲಾಗುತ್ತದೆ. 1.5 ಕಿ.ಮೀ ಉದ್ದದ ರಥಬೀದಿಯಲ್ಲಿ ಒಂದು ಸುತ್ತು ಐದೂ ರಥಗಳನ್ನು ಎಳೆಯುವ ಮೂಲಕ ಭಕ್ತಾಗಳು ಸಂಭ್ರಮಿಸಲಿದ್ದಾರೆ.
ದೊಡ್ಡಜಾತ್ರೆಗೆ ಸಿದ್ಧತೆ
ಐತಿಹಾಸಿಕ ದೊಡ್ಡ ಜಾತ್ರೆ ಪ್ರಯುಕ್ತ ರಥಗಳ ಗಾಲಿಗಳನ್ನು ದುರಸ್ತಿಪಡಿಸಿ ಐದೂ ರಥಗಳಿಗೆ ಬಣ್ಣ ಬಳಿಯಲಾಗಿದೆ. ಜೊತೆಗೆ ದೊಡ್ಡ ರಥವನ್ನು ಎಳೆಯಲು ನೆರವಾಗುವಂತೆ 300 ಅಡಿ ಉದ್ದದ ಬೃಹತ್ ಹಗ್ಗವನ್ನು ಖರೀದಿಸಿ ರಥಕ್ಕೆ ಅಳವಡಿಸಲಾಗುತ್ತದೆ. ಇನ್ನು ಜಾತ್ರೆಗೆ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವ ಜೊತೆಗೆ ಜಾತ್ರೆಯ ಸಮಯದಲ್ಲಿ ಹೆಚ್ಚಿನ ಜನ ಸಂದಣಿ ಇರುವ ನದಿ ತೀರ, ದೇವಾಲಯದ ಆವರಣ, ದಾಸೋಹ ಭವನ ಇನ್ನಿತರ ಪ್ರದೇಶಗಳಲ್ಲಿ ಕಳ್ಳತನ ಅಥವಾ ಇನ್ನಿತರ ಅಕ್ರಮ ಚಟುವಟಿಕೆಗಳು ಜರುಗದಂತೆ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ.
ಸಾರ್ವಜನಿಕರು ಓಡಾಡುವ ಪ್ರದೇಶಗಳಲ್ಲಿ ಪೊಲೀಸ್ ವಾಜ್ ಟವರ್‌ಗಳನ್ನು ನಿರ್ಮಿಸಲಾಗಿದೆ. ಉಳಿದಂತೆ ಜಾತ್ರೆಯ ಸಲುವಾಗಿ ನಂಜನಗೂಡಿಗೆ ಆಗಮಿಸುವ ಭಕ್ತರಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕೆಎಸ್‌ಆರ್‌ಟಿಸಿ ಮೂಲಕ ಹೆಚ್ಚುವರಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಏ.03 ರಂದು ದೇವಾಲಯದಲ್ಲಿ ನಡೆಯಲಿರುವ ನಂದಿ ವಾಹನೋತ್ಸವದೊಂದಿಗೆ ಪ್ರಸಕ್ತ ವರ್ಷದ ದೊಡ್ಡ ಜಾತ್ರಾ ಮಹೋತ್ಸವದ ಧಾರ್ಮಿಕ ಪೂಜಾ ಕಾರ್ಯಗಳು ಸಂಪನ್ನಗೊಳ್ಳಲಿದೆ.
ರಥೋತ್ಸವಕ್ಕೆ ಇನ್ನೂ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ರಥ ಕಟ್ಟುವ ಕಾರ್ಯವು ಭರದಿಂದ ಸಾಗುತ್ತಿದೆ. ಗೌತಮ ಪಂಚ ಮಹಾ ರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ದೊಡ್ಡ ಜಾತ್ರಾ ಮಹೋತ್ಸವವನ್ನು ಲಕ್ಷಾಂತರ ಭಕ್ತರು ಕಣ್ಣುಂಬಿಕೊಳ್ಳಲಿದ್ದಾರೆ.
