ಮೈಸೂರು, ಮಾರ್ಚ್ 27, 2026: ನಾಡಿನೆಲ್ಲೆಡೆ ಇಂದು ಮರ್ಯಾದ ಪುರುಷೋತ್ತಮ, ಪಿತೃ ವಾಕ್ಯ ಪರಿಪಾಲಕ ಶ್ರೀರಾಮನ ನಾಮ ಸ್ಮರಣೆ ಮೊಳಗುತ್ತಿದ್ದು, ಶ್ರೀರಾಮ ನವಮಿಯನ್ನು ಅತ್ಯಂತ ಭಕ್ತಿ ಸಡಗರದಿಂದ ಆಚರಿಸಲಾಗುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ವಿವಿಧ ಶ್ರೀರಾಮಮಂದಿರಗಳಲ್ಲಿ ಇಂದು ಬೆಳಗಿನ ಜಾವದಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿವೆ.

ನಗರದ ಶಿವರಾಂಪೇಟೆಯಲ್ಲಿರುವ ಶ್ರೀ ರಾಮಾಭ್ಯುದಯ ಸಭಾದಲ್ಲಿ ಸತತ 136ನೇ ವರ್ಷದ ಶ್ರೀರಾಮ ನವಮಿ ಆಚರಣೆ ನಡೆಯುತ್ತಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಮಂದಿರವನ್ನು ವಿವಿಧ ಬಗೆಯ ಪುಷ್ಪಗಳಿಂದ ಮನಮೋಹಕವಾಗಿ ಅಲಂಕರಿಸಲಾಗಿದ್ದು, ಮುಂಜಾನೆಯಿಂದಲೇ ಸಾಂಪ್ರದಾಯಿಕ ಪೂಜೆಗಳು ನೆರವೇರುತ್ತಿವೆ.
ದೇವಸ್ಥಾನಕ್ಕೆ ಆಗಮಿಸಿದ ನೂರಾರು ಭಕ್ತರಿಗೆ ಹೆಸರು ಬೇಳೆ ಕೋಸಂಬರಿ, ಪಾನಕ ಹಾಗೂ ಮಜ್ಜಿಗೆಯನ್ನು ಪ್ರಸಾದವಾಗಿ ವಿತರಿಸಲಾಯಿತು. ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀ ರಾಮಾಭ್ಯುದಯ ಸಭಾದ ಅಧ್ಯಕ್ಷರಾದ ಡಾ. ಶ್ರೀರಾಮ್ ಅವರು ಈ ಬಾರಿಯ ಆಚರಣೆ ಮತ್ತು ಮಂದಿರದ ಪರಂಪರೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
