ಮೈಸೂರು, ನವೆಂಬರ್ 04: ಮೈಸೂರು ದಸರಾ ಆಚರಣೆ ಹಾಗೂ ಅರಮನೆ ಸಂಪ್ರದಾಯಗಳಿಗೆ ಅಡಚಣೆ ಉಂಟಾಗಿದೆ ಎಂಬ ವಿವಾದದ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಅರಮನೆ ಮತ್ತು ಖಾಸಗಿ ಆಸ್ತಿಗಳ ಬಗ್ಗೆ ಸಂಪೂರ್ಣ ಸ್ಪಷ್ಟನೆ ನೀಡಿದ್ದಾರೆ. ಅಂಬಾರಿ ಹಾಗೂ ಸಿಂಹಾಸನವು ಅರಮನೆ ಸ್ವಾಧೀನ ಕಾಯ್ದೆಗೆ ಒಳಪಡದ ಸಂಪೂರ್ಣ ಖಾಸಗಿ ಸ್ವತ್ತಾಗಿದ್ದು, ಹಿಂದೆಯೂ ನಮ್ಮ ಸುಪರ್ದಿಯಲ್ಲೇ ಇತ್ತು, ಮುಂದೆಯೂ ನಮ್ಮದಾಗಿಯೇ ಇರಲಿದೆ ಎಂದು ಸ್ಪಪಡಿಸಿದ್ದಾರೆ. 1947ರಲ್ಲಿಯೇ ಖಾಸಗಿ ಸ್ವತ್ತುಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದ್ದು, 1951ರಲ್ಲಿ ವಿ.ಪಿ. ಮೆನನ್ ಅವರು ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ ಎಂದರು.
30 ದಿನಗಳಲ್ಲಿ ಅರಮನೆ ಮರಳಿಸಲು ಕೋರ್ಟ್ ಆದೇಶಿಸಿದ್ದರೂ ಜಾರಿಯಾಗಿಲ್ಲ!
ಜಯಚಾಮರಾಜ ಒಡೆಯರ್ ನಿಧನದ ಬಳಿಕ 8 ಕೋಟಿ ರೂ.ಗೂ ಅಧಿಕ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ಬಂದಾಗ, ಅರಮನೆ ನೋಡಿಕೊಳ್ಳುವುದಾಗಿ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ ಒಪ್ಪಂದದಂತೆ ನಡೆದುಕೊಳ್ಳದ ಕಾರಣ ನಾವು ಕೋರ್ಟ್ ಮೊರೆ ಹೋಗಿದ್ದು, 30 ದಿನಗಳಲ್ಲಿ ಅರಮನೆ ಮರಳಿಸುವಂತೆ ಕೋರ್ಟ್ ಆದೇಶಿಸಿದ್ದರೂ ಸರ್ಕಾರ ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು. ಅಧಿಕಾರಿಗಳಿಗೆ ನಮ್ಮ ಖಾಸಗಿ ಆಸ್ತಿಗಳ ಬಗ್ಗೆ ಸರಿಯಾದ ಓದು ಹಾಗೂ ಮಾಹಿತಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
