ಮಂಡ್ಯ, ಫೆಬ್ರವರಿ 28, 2026: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹುಟ್ಟುಹಬ್ಬದ ಅಂಗವಾಗಿ ಮಂಡ್ಯ ನಗರದಾದ್ಯಂತ ಬಿಜೆಪಿ ಕಾರ್ಯಕರ್ತರು ವಿವಿಧ ಜನಪರ ಮತ್ತು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶೇಷವಾಗಿ ಆಚರಿಸಿದರು.
ನಗರದ ಬನ್ನೂರು ರಸ್ತೆಯಲ್ಲಿರುವ ಚಮ್ಮಾರರ ಕುಟೀರಕ್ಕೆ ಭೇಟಿ ನೀಡಿದ ಕಾರ್ಯಕರ್ತರು, ಅಲ್ಲಿ ಕೆಲಸ ಮಾಡುತ್ತಿದ್ದ ಶ್ರಮಿಕರಿಗೆ ಹೊಸ ಬಟ್ಟೆ ಹಾಗೂ ಸಿಹಿ ವಿತರಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರಿಗೂ ಸಿಹಿ ಹಂಚಿ ಶುಭ ಕೋರಲಾಯಿತು.
ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಬಟ್ಟೆಗಳನ್ನು ವಿತರಿಸುವ ಜೊತೆಗೆ ಅನ್ನಸಂತರ್ಪಣೆ ಮತ್ತು ಸಿಹಿ ಹಂಚುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿ ಬಲವರ್ಧನೆಗೆ ಯಡಿಯೂರಪ್ಪನವರ ಕೊಡುಗೆ ಅನನ್ಯವಾದುದು ಎಂದು ಸ್ಮರಿಸಿದರು. ಶಿಖಾರಿಪುರ ಪುರಸಭಾ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಬಿಎಸ್‌ವೈ ಅವರು, 1972ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಇತಿಹಾಸವನ್ನು ಮೆಲುಕು ಹಾಕಿದರು. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಮತ್ತು ವಿರೋಧ ಪಕ್ಷದ ನಾಯಕರಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ಅವರು, ಪ್ರತ್ಯೇಕ ರೈತ ಬಜೆಟ್ ಮಂಡಿಸುವ ಮೂಲಕ ರೈತಬಾಂಧವರ ಕಣ್ಮಣಿಯಾದರು ಎಂದು ಗುಣಗಾನ ಮಾಡಿದರು.
ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ಜಾರಿಗೆ ಬಂದ ಸೈಕಲ್ ವಿತರಣೆ, ಭಾಗ್ಯಲಕ್ಷ್ಮಿ ಯೋಜನೆ ಹಾಗೂ ಕೆರೆ-ಕಟ್ಟೆಗಳನ್ನು ತುಂಬಿಸುವಂತಹ ದೂರದೃಷ್ಟಿಯ ಯೋಜನೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಇದೇ ವೇಳೆ ಬಿಜೆಪಿ ಮುಖಂಡ ಶಿವಕುಮಾರ್ ಆರಾಧ್ಯ ಅವರು ಬಿಎಸ್‌ವೈ ಅವರೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡು, ಸಾಮಾನ್ಯ ಕಾರ್ಯಕರ್ತರ ಕಷ್ಟ-ಸುಖಗಳಿಗೆ ಸ್ಪಂದಿಸುವ ಅವರ ತಾಳ್ಮೆ ಮತ್ತು ಕಾಳಜಿಯೇ ಅವರನ್ನು ಜನನಾಯಕರನ್ನಾಗಿ ಮಾಡಿದೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ನೆರಳು ಕೃಷ್ಣ, ಪ್ರಸನ್ನಕುಮಾರ್, ಶಿವಲಿಂಗಯ್ಯ, ಸಾತನೂರು ಯೋಗೇಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
