ಮೈಸೂರು, ಫೆಬ್ರವರಿ 28, 2026 : ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸತ್ಯ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಫಲವಾಗಿವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮೈಸೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದ ಆಂತರಿಕ ಭಿನ್ನಮತದ ಕುರಿತು: ಪಕ್ಷದ ಕೆಲ ಶಾಸಕರು ಬಹಿರಂಗವಾಗಿ ಅಸಮಾಧಾನ ತೋಡಿಕೊಳ್ಳುತ್ತಿರುವ ಬಗ್ಗೆ ಮಾತನಾಡಿದ ಅವರು, “ರಾಜ್ಯ ಕಾಂಗ್ರೆಸ್‌ನಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರುವುದು ಸತ್ಯ. ಆದರೆ, ಶಾಸಕರು ತಮ್ಮ ಅಸಮಾಧಾನವನ್ನು ನಾಯಕರ ಮುಂದೆ ಅಥವಾ ಹೈಕಮಾಂಡ್ ಬಳಿ ಚರ್ಚಿಸಬೇಕು. ಅದನ್ನು ಬಿಟ್ಟು ಸಾರ್ವಜನಿಕವಾಗಿ ಮಾತನಾಡುವುದು ಪಕ್ಷಕ್ಕೆ ಶೋಭೆಯಲ್ಲ. ನಾಯಕತ್ವ ಬದಲಾವಣೆ ಎಂಬುದು ನಮ್ಮ ಕೈಲಿಲ್ಲ, ಅದು ಹೈಕಮಾಂಡ್ ವಿವೇಚನೆಗೆ ಬಿಟ್ಟದ್ದು. ತನ್ವೀರ್ ಸೇಠ್ ಮತ್ತು ಬಾಲಕೃಷ್ಣ ಅವರಂತಹ ನಾಯಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ, ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದ್ದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ,” ಎಂದರು.
ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ವಿಳಂಬ: ಸಾಮಾಜಿಕ ನ್ಯಾಯದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉಗ್ರಪ್ಪ, “ಅತ್ಯಂತ ನೋವಿನಿಂದ ಈ ಮಾತನ್ನು ಹೇಳುತ್ತಿದ್ದೇನೆ, ರಾಜ್ಯದಲ್ಲಿ ಎಸ್.ಸಿ (17%), ಎಸ್.ಟಿ (7%) ಮತ್ತು ಒಬಿಸಿ (32%) ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯ ಸಿಗುತ್ತಿಲ್ಲ. ತಮಿಳುನಾಡಿನ ಮಾದರಿಯಲ್ಲಿ 69% ಮೀಸಲಾತಿ ಜಾರಿಯಾಗಬೇಕು. ಮೀಸಲಾತಿ ಯಾರಪ್ಪನ ಸ್ವತ್ತಲ್ಲ, ನಾವು ಭಿಕ್ಷೆ ಬೇಡುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಒಟ್ಟು 56% ಮೀಸಲಾತಿಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.
ಹುದ್ದೆಗಳ ಭರ್ತಿ ಮತ್ತು ಉದ್ಯೋಗ ನಷ್ಟ: “ಕೇಂದ್ರ ಸರ್ಕಾರದ 40 ಲಕ್ಷ ಹುದ್ದೆಗಳು ಖಾಲಿ ಇವೆ. ಪ್ರಧಾನಿ ಮೋದಿ ಅವರು ಕೇವಲ ಪಕೋಡ, ವಡೆ ಮಾರಿ ಎನ್ನುವುದನ್ನು ಬಿಟ್ಟು ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ರಾಜ್ಯ ಸರ್ಕಾರ ನೇಮಕ ಮಾಡುವುದಾಗಿ ಹೇಳಿರುವ 56 ಸಾವಿರ ಹುದ್ದೆಗಳಲ್ಲಿ ಎಸ್.ಟಿ ಸಮುದಾಯಕ್ಕೆ ಸಿಗಬೇಕಾದ 3,750 ಹುದ್ದೆಗಳ ಬದಲಿಗೆ ಕೇವಲ 1,600 ಹುದ್ದೆಗಳು ಮಾತ್ರ ಸಿಗುವ ಸಾಧ್ಯತೆ ಇದೆ. ಹೈಕೋರ್ಟ್ ಮತ್ತು ಕೆಎಟಿ (KAT) ತಡೆಯಾಜ್ಞೆ ತೆರವುಗೊಳಿಸದ ಪರಿಣಾಮ ಸುಮಾರು 2 ಸಾವಿರಕ್ಕೂ ಹೆಚ್ಚು ಹುದ್ದೆಗಳು ನಷ್ಟವಾಗಲಿವೆ,” ಎಂದು ಆತಂಕ ವ್ಯಕ್ತಪಡಿಸಿದರು.
ಸರ್ವಪಕ್ಷ ಸಭೆಗೆ ಆಗ್ರಹ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಈ ಬಗ್ಗೆ ಸರ್ವಪಕ್ಷಗಳ ಸಭೆ ಕರೆದು, ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಬೇಕು ಎಂದು ಒತ್ತಾಯಿಸಿದ ಅವರು, “ಹಿಂದುಳಿದ ವರ್ಗಗಳನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳಬೇಡಿ. ವಾಲ್ಮೀಕಿ ನಿಗಮದ ಹಣ ಲೂಟಿಯಾದರೂ ಕೇಳುವವರಿಲ್ಲದಂತಾಗಿದೆ. ಎಸ್.ಸಿ, ಎಸ್.ಟಿ ಸಮುದಾಯಗಳ ತಾಳ್ಮೆಯನ್ನು ಪರೀಕ್ಷಿಸಬೇಡಿ. ನಮ್ಮನ್ನು ಯಾರು ರಕ್ಷಿಸುತ್ತಾರೋ ಅವರ ಪರವಾಗಿ ನಾವು ನಿಲ್ಲುತ್ತೇವೆ,” ಎಂದು ಎಚ್ಚರಿಕೆ ನೀಡಿದರು.
