ಮೈಸೂರು, ಫೆಬ್ರವರಿ 24, 2026 : ಮೈಸೂರು ವೀಳ್ಯದೆಲೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಮನ್ನಣೆ ಲಭಿಸಿದ್ದರೂ ಸಹ, ಅಂದಿನ ಮೈಸೂರು ಅರಸರು ಈ ವಿಶಿಷ್ಟ ಬೆಳೆಗಾಗಿ ಮೀಸಲಿಟ್ಟಿದ್ದ ಐತಿಹಾಸಿಕ ಪ್ರದೇಶವು ಇಂದು ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ. ಅರಸರ ಕಾಲದಿಂದಲೂ ವಿಶೇಷ ಮಹತ್ವ ಪಡೆದಿರುವ ಮೈಸೂರು ವೀಳ್ಯದೆಲೆಯನ್ನು ಉಳಿಸಿ ಬೆಳೆಸಲು ಅಂದಿನ ಆಳರಸರು ರಾಮಾನುಜ ರಸ್ತೆಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಪ್ರತ್ಯೇಕ ಭೂಮಿಯನ್ನು ಮೀಸಲಿಟ್ಟಿದ್ದರು. ಈ ಭಾಗವು ಕಾಲಾನಂತರದಲ್ಲಿ ‘ಎಲೆತೋಟ’ ಎಂದೇ ಪ್ರಸಿದ್ಧಿ ಪಡೆದಿತ್ತು. ಆದರೆ ಇಂದು ಆಧುನೀಕತೆ ಮತ್ತು ನಗರೀಕರಣದ ವೇಗಕ್ಕೆ ಸಿಲುಕಿರುವ ಈ ಪಾರಂಪರಿಕ ತೋಟಗಳು ಬಹುತೇಕ ವಸತಿ ಬಡಾವಣೆಗಳಾಗಿ ಮಾರ್ಪಾಡಾಗಿರುವುದು ವಿಷಾದನೀಯ ಸಂಗತಿಯಾಗಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮೈಸೂರು ವೀಳ್ಯದೆಲೆಯ ಜಾಗತಿಕ ಮಾನ್ಯತೆಯ ಬಗ್ಗೆ ಹೆಮ್ಮೆಯಿಂದ ಪ್ರಸ್ತಾಪಿಸಿದ್ದರು. ಆದರೆ ವಾಸ್ತವದಲ್ಲಿ ಈ ಬೆಳೆಯು ತೀವ್ರ ಅವನತಿಯತ್ತ ಸಾಗುತ್ತಿದ್ದು, ಪ್ರಸ್ತುತ ಅತ್ಯಂತ ಕಿರಿದಾದ ಜಾಗದಲ್ಲಿ ಮಾತ್ರ ವೀಳ್ಯದೆಲೆ ಕಾಣಸಿಗುತ್ತಿದೆ. ಎಲೆತೋಟದ ಬಹುತೇಕ ಭಾಗಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಸಂಜೆಯಾಗುತ್ತಿದ್ದಂತೆ ಈ ಪ್ರದೇಶವು ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿದೆ. ತೋಟದ ಮೂಲೆ ಮೂಲೆಗಳಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು ಇಲ್ಲಿನ ದುಸ್ಥಿತಿಗೆ ಸಾಕ್ಷಿಯಾಗಿವೆ. ಇಂತಹ ಸವಾಲುಗಳ ನಡುವೆಯೂ ಹರೀಶ್ ಮತ್ತು ಲಕ್ಷ್ಮಣ್ ಸೇರಿದಂತೆ ಹಲವು ಬೆಳೆಗಾರರು ತಮ್ಮ ಪೂರ್ವಜರ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಪ್ರಸ್ತುತ ಈ ತೋಟಗಳಲ್ಲಿ ವೀಳ್ಯದೆಲೆಗಿಂತ ಹೆಚ್ಚಾಗಿ ಅಡಿಕೆ ಮರಗಳಿಂದ ಬರುವ ಆದಾಯವನ್ನೇ ನಂಬಿ ಅನೇಕ ಕುಟುಂಬಗಳು ಜೀವನ ಸಾಗಿಸುತ್ತಿವೆ. ನಗರೀಕರಣದ ಪ್ರಭಾವದಿಂದಾಗಿ ಅಳಿದುಳಿದ ಕುಂಟೆ ಅಳತೆಯ ಜಾಗದಲ್ಲಿ ಮಾತ್ರ ಕೃಷಿ ಮಾಡಲಾಗುತ್ತಿದೆ. ಈ ಕುರಿತು ಅಳಲು ತೋಡಿಕೊಂಡಿರುವ ಸ್ಥಳೀಯ ಬೆಳೆಗಾರರು, ವಿನಾಶದ ಅಂಚಿನಲ್ಲಿರುವ ಮೈಸೂರಿನ ಹೆಮ್ಮೆಯ ವೀಳ್ಯದೆಲೆ ಬೆಳೆಯನ್ನು ಸಂರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸರ್ಕಾರವು ಈ ಪಾರಂಪರಿಕ ತಾಣವನ್ನು ಪುನಶ್ಚೇತನಗೊಳಿಸದಿದ್ದರೆ ಮುಂದಿನ ಪೀಳಿಗೆಗೆ ಮೈಸೂರು ವೀಳ್ಯದೆಲೆ ಕೇವಲ ಇತಿಹಾಸದ ಪುಟಗಳಲ್ಲಿ ಮಾತ್ರ ಉಳಿಯಲಿದೆ ಎಂಬ ಆತಂಕ ವ್ಯಕ್ತವಾಗಿದೆ.
