ಮೈಸೂರು, ಫೆಬ್ರವರಿ 21, 2026 : “ಮಾಡಲು ಕೆಲಸವಿಲ್ಲದವರ ಆರೋಪಕ್ಕೆ ಉತ್ತರಿಸುವುದಿಲ್ಲ” ಎಂಬ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವರ್ಗಾವಣೆ ದಂಧೆ ಮಾಡುವುದು ಮತ್ತು ಅಪ್ಪನ ಅಧಿಕಾರ ದುರುಪಯೋಗಪಡಿಸಿಕೊಂಡು ಮ್ಯಾಟ್ರಿಕ್ಸ್ ಲ್ಯಾಬ್ ಹೆಸರಲ್ಲಿ ಹಣ ಮಾಡುವುದು ಕೆಲಸವೇ ಎಂದು ಪ್ರಶ್ನಿಸಿದರು. ಅಪ್ಪನ ಹೆಸರಿಲ್ಲದಿದ್ದರೆ ನಿಮ್ಮನ್ನು ಯಾರೂ ಕ್ಯಾರೇ ಎನ್ನುತ್ತಿರಲಿಲ್ಲ ಎಂದು ಲೇವಡಿ ಮಾಡಿದ ಅವರು, ನಿಮ್ಮ ಅಪ್ಪ ಬೆಂಗಳೂರಿನಿಂದ ಮೈಸೂರಿಗೆ ಆರಾಮವಾಗಿ ಓಡಾಡಲು ರಸ್ತೆ ಮಾಡಿಸಿದ್ದು ಇದೇ ಪ್ರತಾಪ್ ಸಿಂಹ ಎಂಬುದು ನೆನಪಿರಲಿ ಎಂದು ನೆನಪಿಸಿದರು. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಮೈಸೂರಿನಿಂದಲೇ ಗೆದ್ದು ಬರುವುದಾಗಿ ಸವಾಲು ಹಾಕಿದ ಅವರು, ತಾಕತ್ತಿದ್ದರೆ ಸಿದ್ದರಾಮಯ್ಯ ಅವರು ಮೈಸೂರು ನಗರದಲ್ಲಿ ಸ್ಪರ್ಧಿಸಲಿ ಎಂದು ಅಬ್ಬರಿಸಿದರು.
ಫ್ಲೆಕ್ಸ್ ಹಾವಳಿ ವಿರುದ್ಧ ಪಾಲಿಕೆಗೆ ಮನವಿ: ಇದೇ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಮಿತಿಮೀರಿರುವ ಫ್ಲೆಕ್ಸ್ ಹಾವಳಿ ಮತ್ತು ಅವೈಜ್ಞಾನಿಕ ಜಾಹಿರಾತು ಫಲಕಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಾಪ್ ಸಿಂಹ ಅವರು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಲಾಗಿರುವ ಬೃಹತ್ ಫ್ಲೆಕ್ಸ್‌ಗಳು ವಾಹನ ಸವಾರರ ಗಮನ ಬೇರೆಡೆಗೆ ಸೆಳೆಯುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿವೆ. ಮಾರ್ಗಸೂಚಿ ಫಲಕಗಳ ಮೇಲೆಯೂ ವಾಣಿಜ್ಯ ಜಾಹಿರಾತುಗಳನ್ನು ಹಾಕಿರುವುದು ಸರಿಯಲ್ಲ, ಕೂಡಲೇ ಇವುಗಳನ್ನು ತೆರವುಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ತ್ಯಾಜ್ಯ ವಿಲೇವಾರಿ ಯಶಸ್ಸು ಮೋದಿ ಸರ್ಕಾರಕ್ಕೆ: ಮೈಸೂರಿನಲ್ಲಿ ಹತ್ತಾರು ವರ್ಷಗಳಿಂದ ಬೆಟ್ಟದಂತೆ ಸಂಗ್ರಹವಾಗಿದ್ದ ಸಾವಿರಾರು ಟನ್ ಕಸದ ವಿಲೇವಾರಿ ಕಾರ್ಯ ಅಂತಿಮ ಹಂತಕ್ಕೆ ಬಂದಿರುವ ಕುರಿತು ಪ್ರತಾಪ್ ಸಿಂಹ ಹರ್ಷ ವ್ಯಕ್ತಪಡಿಸಿದರು. ನಾನು ಸಂಸದನಾಗಿದ್ದ ಅವಧಿಯಲ್ಲಿ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಿಸಿದ್ದರಿಂದಲೇ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಯಾಗಿದ್ದು, ಈ ಮೂಲಕ ಆ ಭಾಗದ ಜನರ ಹತ್ತಾರು ವರ್ಷಗಳ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ಅವರು ವಿವರಿಸಿದರು.
ಬಾಗಲಕೋಟೆ ಘಟನೆಗೆ ಖಂಡನೆ ಹಾಗೂ ಪ್ರತಿಭಟನೆ: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟವನ್ನು ಪ್ರತಾಪ್ ಸಿಂಹ ಕಠಿಣವಾಗಿ ಖಂಡಿಸಿದರು. ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯಿಂದಾಗಿ ಕಿಡಿಗೇಡಿಗಳಿಗೆ ಭಯವಿಲ್ಲದಂತಾಗಿದೆ ಎಂದು ಅವರು ಕಿಡಿಕಾರಿದರು. ಈ ಘಟನೆಯನ್ನು ಪ್ರತಿಭಟಿಸಿ ಮೈಸೂರಿನ ಕೇಂದ್ರ ಬಸ್ ನಿಲ್ದಾಣದ ಬಳಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸಂಚಾರವನ್ನು ಸುಗಮಗೊಳಿಸಿದರು.
