ಚಿಕ್ಕಮಗಳೂರು, ಸೆ.30: ತಾನು ಬೆಂಗಳೂರಿನ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (PSI) ಎಂದು ಸುಳ್ಳು ಹೇಳಿ, ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ, ಚಿನ್ನ ಹಾಗೂ ಐಷಾರಾಮಿ ಕಾರುಗಳನ್ನು ಪಡೆದು ಭಾರಿ ವಂಚನೆ ಎಸಗುತ್ತಿದ್ದ ಖತರ್ನಾಕ್ ನಕಲಿ ಲೇಡಿ ಪಿಎಸ್‌ಐ ಪ್ರಮುಖ ಆರೋಪಿಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. ರಾಮನಗರ ಮೂಲದ ನಿವೇದಿತಾ ಗೌಡ ಬಂಧಿತ ಆರೋಪಿಯಾಗಿದ್ದು, ಈಕೆಯಿಂದ ವಂಚನೆಗೊಳಗಾದ 25ಕ್ಕೂ ಹೆಚ್ಚು ಸಂತ್ರಸ್ತರು ದೂರು ನೀಡಿದ ಹಿನ್ನೆಲೆಯಲ್ಲಿ ಬಸವನಹಳ್ಳಿ ಹಾಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ನಿವೇದಿತಾ ಗೌಡ ಮೂಲತಃ ರಾಮನಗರದವಳಾಗಿದ್ದು, ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶವಾದ ಐ.ಜಿ. ರಸ್ತೆಯಲ್ಲಿ ಕೆಫೆಯೊಂದನ್ನು ನಡೆಸುತ್ತಿದ್ದಳು. ಸಾರ್ವಜನಿಕರಿಗೆ ಅನುಮಾನ ಬಾರದಂತೆ ತಾನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯ ಪಿಎಸ್‌ಐ ಎಂದು ಪರಿಚಯಿಸಿಕೊಳ್ಳುತ್ತಿದ್ದಳು. ಜನರು ನಂಬಲಿ ಎನ್ನುವ ಕಾರಣಕ್ಕೆ ಪೊಲೀಸರ ರೀತಿಯೇ ಶಾರ್ಟ್ ಕಟಿಂಗ್ ಮಾಡಿಸಿಕೊಂಡು, ಖಾಕಿ ಯೂನಿಫಾರ್ಮ್ ಮಾದರಿಯ ಉಡುಪು ಧರಿಸುತ್ತಿದ್ದಳು. ಕೆಫೆಗೆ ಬರುವ ಗ್ರಾಹಕರು, ಮಹಿಳೆಯರು ಹಾಗೂ ಯುವಕರನ್ನೇ ಪ್ರಮುಖ ಟಾರ್ಗೆಟ್ ಮಾಡುತ್ತಿದ್ದ ಈಕೆ, “ತಾನು ಪ್ರಸ್ತುತ ಕರ್ತವ್ಯಕ್ಕೆ ರಜೆ ಹಾಕಿ ಚಿಕ್ಕಮಗಳೂರಿಗೆ ಬಂದಿದ್ದೇನೆ” ಎಂದು ಕಥೆ ಕಟ್ಟಿ ನಂಬಿಸುತ್ತಿದ್ದಳು.
