ಕೊಪ್ಪಳ : ವಿಶ್ವವಿಖ್ಯಾತ ಮೈಸೂರು ದಸರಾವನ್ನು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನೆರವೇರಿಸಲಿದ್ದಾರೆ. ಇಂದು (ಸೆಪ್ಟೆಂಬರ್ 28) ಖುದ್ದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗೂ ಜಿಲ್ಲೆಯ ಶಾಸಕರು ಗವಿಮಠಕ್ಕೆ ಭೇಟಿ ನೀಡಿ ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. ಇನ್ನು ಅಭಿನವ ಗವಿಸಿದ್ದೇಶ್ವ ಶ್ರೀಗಳು ಸಹ ಬಹಳ ಸಂತೋಷದಿಂದ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಇದರೊಂದಿಗೆ ಎಲ್ಲಾ ಅಂತೆ ಕಂತೆಗಳಿಗೆ ತೆರೆ ಬಿದ್ದಿದೆ. ಇನ್ನು ಅಕ್ಟೋಬರ್ 11ರಂದು ದಸರಾಗೆ ಚಾಲನೆ ದೊರೆಯಲಿದ್ದು, ಅ.21 ರಂದು ವಿಜಯದಶಮಿ ಜಂಬೂಸವಾರಿ ಜರುಗಲಿದೆ.
ಉದ್ಘಾಟಕರನ್ನು ದಸರಾ ಕಮಿಟಿಯವರು ತೆರಳಿ ಆಹ್ವಾನ ನೀಡುವುದು ಸಂಪ್ರದಾಯ. ಅದರಂತೆ ಈ ಬಾರಿ ದಸರಾ ಉದ್ಘಾಟನೆಗೆ ಒಪ್ಪಿಕೊಂಡ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಆಹ್ವಾನ ನೀಡಲಾಗಿದೆ. ಈ ಸಂದರ್ಭದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ್ , ಶಾಸಕ ರಾಘವೇಂದ್ರ ಹಿಟ್ನಾಳ್, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ನಾಗಪ್ಪ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಹಾಗೂ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಉಪಸ್ಥಿತರಿದ್ದರು
ಇನ್ನು ಶ್ರೀಗಳು ಸರ್ಕಾರದ ಆಹ್ವಾನವನ್ನು ಅತ್ಯಂತ ನಯವಾಗಿಯೇ ಸ್ವೀಕರಿಸಿದ್ದು, ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಲು ಆಗಮಿಸುವುದಾಗಿ ಸರಕಾರದ ಆಹ್ವಾನಕ್ಕೆ ಶ್ರೀಗಳು ಸಮ್ಮತಿ ಸೂಚಿಸಿದರು. ಆಹ್ವಾನ ನೀಡುವ ಸಂದರ್ಭದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು, ಅಕ್ಟೋಬರ್ 10ರ ಸಂಜೆಯೇ ಅಂದರೆ ಉದ್ಘಾಟನೆಯ ಹಿಂದಿನ ದಿನವೇ ಮೈಸೂರಿಗೆ ಆಗಮಿಸಬೇಕೆಂದು ಶ್ರೀಗಳಲ್ಲಿ ಮನವಿ ಮಾಡಿದರು. ಅಷ್ಟೇ ಅಲ್ಲದೆ, ತಾವು ದಸರಾದ ಇಡೀ 11 ದಿನಗಳ ಕಾಲ ಮೈಸೂರಿನಲ್ಲೇ ಇದ್ದು ಭಾಗಿಯಾಗಬೇಕು ಎಂದು ವಿನಂತಿಸಿಕೊಂಡರು.
