ಮಂಗಳೂರು, ಸೆಪ್ಟೆಂಬರ್ 18: ನಾಡಿನ ಕರಾವಳಿಯ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪಣತೊಟ್ಟಿದೆ. ಕರಾವಳಿಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಉದ್ದೇಶದೊಂದಿಗೆ ಮಂಗಳೂರಿನಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಆ ಮೂಲಕ ಕರಾವಳಿ ಭಾಗದ ಪ್ರಗತಿಗೆ ಹೊಸ ಮುನ್ನುಡಿ ಬರೆಯಲಾಗಿದೆ. ಸಭೆಯಲ್ಲಿ 40 ವಿಷಯದ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಮಂಗಳೂರಿನ ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಎಂ ಡಿಕೆ ಶಿವಕುಮಾರ್, ತುಳುನಾಡಿನ ತಂದೆ, ತಾಯಿ ಹಾಗೂ ಯುವ ಮಿತ್ರರಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ, ‘ಈ ಜಿಲ್ಲೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಇಲ್ಲಿನ ಇತಿಹಾಸ ಮತ್ತು ಪರಂಪರೆಯನ್ನು ರಾಷ್ಟ್ರವೇ ಗೌರವಿಸುತ್ತದೆ. ಈ ಜಿಲ್ಲೆಗೆ ಅಳಿಲು ಸೇವೆ ಸಲ್ಲಿಸುವ ಉದ್ದೇಶದಿಂದ, ನಾನು ಅಧಿಕಾರ ವಹಿಸಿಕೊಂಡ ನಂತರ ಬೆಂಗಳೂರಿನ ಹೊರಗೆ ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ ಜನರ ಮುಂದೆ ಕೂತಿದ್ದೇನೆ. ಭಾವನಾತ್ಮಕ ವಿಚಾರಗಳಿಗಿಂತ ಜನರ ಭಾವನೆ ಮೇಲೆ ರಾಜಕೀಯ ಮಾಡಲ್ಲ’ ಎಂದು ಹೇಳಿದರು.
ಸಂಪುಟ ಸಭೆಯಲ್ಲಿ 32,611 ಕೋಟಿ ರೂ ಅಭಿವೃದ್ಧಿ ಯೋಜನೆಗಳಿಗೆ ಅಧಿಕೃತ ಅನುಮೋದನೆ ನೀಡಲಾಗಿದೆ. ಈ ಪೈಕಿ 16,000 ಕೋಟಿ ರೂ ಗ್ರಾಮೀಣಾಭಿವೃದ್ಧಿಗೆ ಹಾಗೂ ಉಳಿದ 16,000 ಕೋಟಿ ರೂ ಕರಾವಳಿ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇದರಲ್ಲಿ ರಸ್ತೆ ಅಭಿವೃದ್ಧಿಗಾಗಿಯೇ 14,000 ಕೋಟಿ ರೂ ಅನುದಾನ ಒದಗಿಸಲಾಗುವುದು’ ಎಂದು ಅವರು ತಿಳಿಸಿದರು.
