ಹಾಸನ, ಸೆಪ್ಟೆಂಬರ್ 17: ಗೌರಿ-ಗಣೇಶ ಹಬ್ಬದ ರಜೆ ಹಿನ್ನೆಲೆ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ 23 ವರ್ಷದ ಸಿಎ ಪದವೀಧರೆ, ತಾಲೂಕಿನ ಹಿರಿಯೂರು ಕೂಡಿಗೆಯ ಲಾಡ್ಜ್ ಒಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
ಬೆಂಗಳೂರಿನಿಂದ ಸ್ನೇಹಿತರ ಜೊತೆಗೆ ಸಕಲೇಶಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಯುವತಿ ತಾನು ವಾಸ್ತವ್ಯ ಹೂಡಿದ್ದ ಲಾಡ್ಜ್ನ ಕೊಠಡಿಯಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗಿದ್ದು, ಸದ್ಯ ಸಾಕಷ್ಟು ಅನುಮಾನ ಮೂಡಿಸಿದೆ. ಮೃತ ಯುವತಿ ಮೂಲತಃ ಬೆಂಗಳೂರಿನ ನಾಗಸಂದ್ರ ಮೂಲದವಳಾಗಿದ್ದು, ಸಿಎ ಪದವಿಧರೆಯಾಗಿದ್ದಳು.
ಮೂಲತಃ ಕೊಡಗು ಜಿಲ್ಲೆಯವರಾದ ಯುವತಿಯ ಪೋಷಕರು ಬೆಂಗಳೂರಿನ ನಾಗಸಂದ್ರದಲ್ಲಿ ನೆಲೆಸಿದ್ದಾರೆ. ಯುವತಿಯ ತಾಯಿ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‘ಇಬ್ಬರು ಗೆಳತಿಯರು ಹಾಗೂ ಇಬ್ಬರು ಗೆಳೆಯರ ಜೊತೆ ಕಾರಿನಲ್ಲಿ ಸಕಲೇಶಪುರಕ್ಕೆ ಟೂರ್ ಹೋಗುವುದಾಗಿ ಮಗಳು ಹೇಳಿ ಹೊರಟಿದ್ದಳು. ಆದರೆ ಅಲ್ಲಿಗೆ ಗೆಳತಿಯರು ಹೋಗಿರಲೇ ಇಲ್ಲ. ಮಗಳ ಜೊತೆ ಓದಿದ್ದ, ನಮಗೆ ಪರಿಚಿತರೇ ಆಗಿದ್ದ ಇಬ್ಬರು ಯುವಕರ ಜೊತೆ ಎಲೆಕ್ಟ್ರಿಕ್ ಆಟೋದಲ್ಲಿ ತೆರಳಿದ್ದಳು. ಇದೀಗ ಮಗಳು ಲಾಡ್ಜ್‌ನಲ್ಲೇ ಮೃತಪಟ್ಟಿದ್ದಾಳೆ ಎಂದು ಹೇಳುತ್ತಿದ್ದಾರೆ’ ಎಂದು ಕಣ್ಣೀರಿಟ್ಟಿರುವ ಪೋಷಕರು, ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಮೂಲದ ರಘು ಹಾಗೂ ದರ್ಶನ್ ಎಂಬುವವರು ಯುವತಿಯ ಜೊತೆಗಿದ್ದರು. ‘ಲಾಡ್ಜ್ ಕೊಠಡಿಯ ಸ್ನಾನಗೃಹಕ್ಕೆ ಹೋದಾಗ ಆಕೆ ಅಸ್ವಸ್ಥಗೊಂಡು ಬಿದ್ದಿದ್ದಳು. ಗ್ಯಾಸ್ ಗೀಸರ್‌ನಿಂದ ಬಿಡುಗಡೆಯಾದ ಕಾರ್ಬನ್ ಮೊನಾಕ್ಸೈಡ್ ಅನಿಲದಿಂದ ಆಕೆ ಅಸ್ವಸ್ಥಳಾಗಿ ಮೃತಪಟ್ಟಿರಬಹುದು’ ಎಂದು ಶಂಕಿಸಲಾಗಿದೆ. ತಕ್ಷಣ ಆಕೆಯನ್ನು ಸಮೀಪದ ಹೆತ್ತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಉಸಿರಾಟ ಸ್ಥಗಿತಗೊಂಡಿದ್ದ ಕಾರಣ ಸಕಲೇಶಪುರ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಯುವತಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
