ಮೈಸೂರು, ಜುಲೈ,23.2026: ರಾಜ್ಯದಲ್ಲಿ ಎಸ್.ಐ.ಆರ್ (SIR) ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲ ಪರಿಹಾರ ಹಾಗೂ ಚಾಮರಾಜ ಕ್ಷೇತ್ರದಲ್ಲಿ ಪ್ರಚಾರ ವಾಹನ ಚಾಲನೆ ಕಾರ್ಯಕ್ರಮದ ವೇಳೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ಸರ್ಕಾರ ಹಾಗೂ ವಿಪಕ್ಷಗಳ ವಿರುದ್ಧ ತೀವ್ರ ಪ್ರಹಾರ ನಡೆಸಿದ್ದಾರೆ.
ಭಾರತದಲ್ಲೂ ಗಲಭೆ ಎಬ್ಬಿಸಲು ಅಮೆರಿಕನ್ ‘ಡೀಪ್ ಸ್ಟೇಟ್’ ಹುನ್ನಾರ’ : ಶ್ರೀಲಂಕಾ, ನೇಪಾಳ ಮತ್ತು ಬಾಂಗ್ಲಾದೇಶಗಳ ಮಾದರಿಯಲ್ಲೇ ಭಾರತದಲ್ಲೂ ಅಶಾಂತಿ ಹಾಗೂ ಗಲಾಟೆ ಸೃಷ್ಟಿಸಲು ದೊಡ್ಡ ಮಟ್ಟದ ಹುನ್ನಾರ ನಡೆದಿದೆ. ಇದರ ಹಿಂದೆ ‘ಅಮೆರಿಕನ್ ಡೀಪ್ ಸ್ಟೇಟ್’ (American Deep State) ಹಸ್ತಕ್ಷೇಪವಿದ್ದು, ಕಾಂಗ್ರೆಸ್ ನಾಯಕರು ಅಮೆರಿಕದ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ.
ಮೋದಿ ಜನಪ್ರಿಯತೆ ತಗ್ಗಿಸುವ ಯತ್ನ: ಜಗತ್ತಿನಾದ್ಯಂತ ಬಲಾಢ್ಯವಾಗಿ ಬೆಳೆದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ತಗ್ಗಿಸಲು ಈ ರೀತಿ ಕುತಂತ್ರ ನಡೆಸಲಾಗುತ್ತಿದೆ. ಆದರೆ ದೇಶದ ಜನತೆ ಮೋದಿಯವರ ಬೆನ್ನಿಗೆ ನಿಂತಿದ್ದು, ಇಂತಹ ಪ್ರಯತ್ನಗಳನ್ನು ಹೇಗೆ ಮಟ್ಟಹಾಕಬೇಕೆಂದು ಪ್ರಧಾನಿಯವರಿಗೆ ಚೆನ್ನಾಗಿ ಗೊತ್ತಿದೆ.
ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿವೆ!: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಎಡಬಿಡಂಗಿಗಳು. ಕಾಂಗ್ರೆಸ್ ನಾಯಕರು ಜನರ ರಕ್ತ ಹೀರುವ ತಿಗಣೆಗಳಾಗಿದ್ದು, ಈಗ ದಾರಿತಪ್ಪಿಸುವ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಅಲ್ಲಿಗೆ ಹೋಗಿ ಕುಳಿತಿರುವುದು ದುರಂತ.
ಕಾಂಗ್ರೆಸ್ ಅವಧಿಯ ಸೋರಿಕೆ ನೆನಪಿಸಿದ ಸಿಂಹ: ವ್ಯವಸ್ಥೆಯಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೆಲವೊಮ್ಮೆ ಲೋಪಗಳು ಸಂಭವಿಸುತ್ತವೆ. ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಕಿಮ್ಮನೆ ರತ್ನಾಕರ್ ಶಿಕ್ಷಣ ಸಚಿವರಾಗಿದ್ದಾಗ ಎಷ್ಟು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು? ಆಗ ಯಾರ ಮೇಲಾದರೂ ಕ್ರಮ ಕೈಗೊಂಡಿರಾ?
ನೀಟ್ ಪರೀಕ್ಷೆ ಸೋರಿಕೆ: ‘ಬಿಜೆಪಿ ಸರ್ಕಾರದಲ್ಲಾಗಿದ್ದಕ್ಕೆ ನಮಗೂ ಬೇಸರವಾಗಿದೆ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಮೋದಿಯವರ ತಪ್ಪಲ್ಲ. ಆದರೂ ನಮ್ಮ ಸರ್ಕಾರದಲ್ಲೇ ಹೀಗಾಗಿರುವುದು ನಮಗೂ ತೀವ್ರ ಬೇಸರ ತಂದಿದೆ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಎನ್‌ಟಿಎ (NTA) ಇಲಾಖೆಯ ಪಿ.ವಿ. ಕುಲಕರ್ಣಿ, ಮನಿಷಾ ಮಂದಾರೆ, ಶಿವರಾಜ್ ಸೇರಿದಂತೆ ಕೋಚಿಂಗ್ ಮಾಫಿಯಾದ ಪ್ರಮುಖರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ.
ಮರು ಪರೀಕ್ಷೆ ಅಂತ್ಯ: ಈಗಾಗಲೇ ಮರು ಪರೀಕ್ಷೆ ನಡೆದು ಫಲಿತಾಂಶವೂ ಬಂದಿದ್ದು, 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 2014ರಲ್ಲಿ ದೇಶದಲ್ಲಿ ಕೇವಲ 320 ಮೆಡಿಕಲ್ ಕಾಲೇಜುಗಳಿದ್ದವು, ಮೋದಿ ಬಂದ ಮೇಲೆ ಆ ಸಂಖ್ಯೆ 825ಕ್ಕೂ ಹೆಚ್ಚಾಗಿದೆ. ಖಾಸಗಿ ಕಾಲೇಜುಗಳ ಡೊನೇಷನ್ ಮಾಫಿಯಾವನ್ನು ತಡೆದು ಮೆರಿಟ್ ಆಧಾರದಲ್ಲಿ ಬಡ ಮಕ್ಕಳಿಗೆ ಸೀಟು ಸಿಗುವಂತೆ ಮಾಡಿದ್ದು ಮೋದಿ ಸರ್ಕಾರ.
ಸಂಸತ್ತಿನಲ್ಲಿ ಚರ್ಚಿಸಿ: ರಾಹುಲ್ ಗಾಂಧಿ ಅವರು ಜಂತರ್ ಮಂತರ್‌ನಲ್ಲಿ ಜಿರಳೆಗಳ ಜೊತೆ ಕುಳಿತು ದಾರಿ ತಪ್ಪಿಸುವ ಬದಲು, ಸಂಸತ್ ಅಧಿವೇಶನದಲ್ಲಿ ವಿಷಯವನ್ನು ಪ್ರಸ್ತಾಪಿಸಿ ಚರ್ಚಿಸಲಿ. ಕೇಂದ್ರ ಸರ್ಕಾರ ವಿಪಕ್ಷಗಳ ಜೊತೆ ಮಾತುಕತೆಗೆ ಸದಾ ಸಿದ್ಧವಿದೆ.
ಚಾಮರಾಜ ಕ್ಷೇತ್ರದಲ್ಲಿ ‘ಎಸ್.ಐ.ಆರ್’ ಜಾಗೃತಿ ಅಭಿಯಾನ
ಬಿಎಲ್‌ಒಗಳ ಲೋಪಕ್ಕೆ ಡಿಸಿ ಸ್ಪಂದನೆ: ರಾಜ್ಯದಲ್ಲಿ ನಡೆಯುತ್ತಿರುವ ಎಸ್.ಐ.ಆರ್ (SIR) ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲ ಮೂಡಿದೆ. ಬಿಎಲ್‌ಒಗಳು ಮನೆಮನೆಗೆ ಫಾರಂ ತಲುಪಿಸದ ಕಾರಣ, ಪ್ರತಿ ಭಾನುವಾರ ಮತಗಟ್ಟೆಗಳಲ್ಲೇ ಫಾರಂ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು.
ಪ್ರಚಾರ ವಾಹನಕ್ಕೆ ಚಾಲನೆ: ಡಿಸಿ ಅವರು ಮನವಿಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ, ಚಾಮರಾಜ ಕ್ಷೇತ್ರದಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಲು ಇಂದಿನಿಂದ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿದೆ. ಬಿಜೆಪಿ ಕಾರ್ಯಕರ್ತರು ಮತಗಟ್ಟೆಗಳಲ್ಲಿ ಸಾರ್ವಜನಿಕರಿಗೆ ಅರ್ಜಿ ಭರ್ತಿ ಮಾಡಲು ನೆರವಾಗಲಿದ್ದಾರೆ. ವೋಟರ್ ಐಡಿ ಇಲ್ಲದಿದ್ದರೆ ಮತದಾನದ ಹಕ್ಕು ಇರುವುದಿಲ್ಲ, ಹಾಗಾಗಿ ಪ್ರತಿಯೊಬ್ಬರೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು.
