ಮೈಸೂರು, ಫೆಬ್ರವರಿ 6, 2026 : ಮೈಸೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಜಿಲ್ಲಾಡಳಿತದ ಜೆಸಿಬಿಗಳು ಗರ್ಜಿಸಿದ್ದು, ಅಕ್ರಮವಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದವರಿಗೆ ತಹಸೀಲ್ದಾರ್ ನೇತೃತ್ವದ ತಂಡ ಭರ್ಜರಿ ಶಾಕ್ ನೀಡಿದೆ.
ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಸರ್ವೇ ನಂಬರ್ 87ಕ್ಕೆ ಸೇರಿದ ಸುಮಾರು 38 ಗುಂಟೆ ಸರ್ಕಾರಿ ಜಾಗವನ್ನು ಅಧಿಕಾರಿಗಳು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ. ಈ ಜಾಗವು ಕಳೆದ ಹಲವು ವರ್ಷಗಳಿಂದ ಖಾಸಗಿ ವ್ಯಕ್ತಿಗಳ ಪಾಲಾಗಿದ್ದು, ಅಲ್ಲಿ ಅಕ್ರಮವಾಗಿ ‘ಪೇ ಅಂಡ್ ಪಾರ್ಕಿಂಗ್’ ವ್ಯವಹಾರವನ್ನು ನಡೆಸಲಾಗುತ್ತಿತ್ತು.
ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಪೂರಕ ಕ್ರಮ
ವಾಸ್ತವವಾಗಿ ಈ ಜಾಗವು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ನಂತರದ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆಂದು ಮಂಜೂರಾಗಿತ್ತು. ಆದರೆ ಒತ್ತುವರಿಯಾಗಿದ್ದ ಕಾರಣ ಕಟ್ಟಡ ಕಾಮಗಾರಿ ಆರಂಭಿಸಲು ಅಡೆತಡೆಯುಂಟಾಗಿತ್ತು. ಸಾರ್ವಜನಿಕ ಆಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಮೈಸೂರು ತಾಲೂಕು ತಹಸೀಲ್ದಾರ್, ಎರಡು ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಸಿ ಅಕ್ರಮ ನಿರ್ಮಾಣಗಳನ್ನು ಧರೆಗುರುಳಿಸಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾರ್ಯಾಚರಣೆ
ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗೃತ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸರ್ಕಾರದ ಆಸ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಡೆಸಿದ ಈ ದಿಢೀರ್ ಕಾರ್ಯಾಚರಣೆಯು ಒತ್ತುವರಿದಾರರಲ್ಲಿ ನಡುಕ ಹುಟ್ಟಿಸಿದೆ. ಸದ್ಯ ಒತ್ತುವರಿ ಮುಕ್ತಗೊಂಡಿರುವ ಈ ಜಾಗದಲ್ಲಿ ಶೀಘ್ರದಲ್ಲೇ ವಿದ್ಯಾರ್ಥಿ ನಿಲಯದ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.
