ಮೈಸೂರು, ಜುಲೈ 11, 2026: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾದಲ್ಲಿ ಕಂಬಳ ಆಯೋಜನೆ ಬೇಡ ಎಂದು ತಾವು ಈಗಾಗಲೇ ದಸರಾ ಹೈ ಪವರ್ ಕಮಿಟಿ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿರುವುದಾಗಿ ತಿಳಿಸಿದರು. ಕಂಬಳದ ಸಾಂಸ್ಕೃತಿಕ ಹಿನ್ನೆಲೆಯೇ ಬೇರೆ ಮತ್ತು ದಸರಾದ ಹಿನ್ನೆಲೆಯೇ ಬೇರೆಯಾಗಿದ್ದು, ಎಲ್ಲದಕ್ಕೂ ದಸರಾವನ್ನು ಜೋಡಿಸುವುದು ಸರಿಯಲ್ಲ ಎನ್ನುವುದು ಮೈಸೂರಿನ ಜನರ ಭಾವನೆಯಾಗಿದೆ ಎಂದರು. ಇದೇ ವೇಳೆ ಕಂಬಳ ವಿಚಾರವಾಗಿ ಶಾಸಕ ಅಶೋಕ ರೈ ಅವರು ತಮಗೆ ಯಾವುದೇ ವಿವರಣೆ ನೀಡಿಲ್ಲ ಮತ್ತು ಅದರ ಅಗತ್ಯವೂ ತಮಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಒಂದು ವೇಳೆ ಸರ್ಕಾರ ಕಂಬಳ ಆಯೋಜನೆ ಮಾಡಿದರೆ ಅದು ಮೈಸೂರು ಜನರ ಭಾವನೆಗೆ ವಿರುದ್ಧವಾಗಿ ಮಾಡಿದಂತೆ ಆಗುತ್ತದೆ ಎಂದ ಯದುವೀರ್, ಈ ಸರ್ಕಾರವು ಇದುವರೆಗೂ ಜನರ ಭಾವನೆಗೆ ವಿರುದ್ಧವಾಗಿಯೇ ಕೆಲಸ ಮಾಡಿಕೊಂಡು ಬಂದಿದೆ ಎಂದು ಟೀಕಿಸಿದರು.
ತಾವು ಕಂಬಳಕ್ಕೆ ವಿರೋಧವಾಗಿಲ್ಲ, ಆದರೆ ದಸರಾ ವೇಳೆ ಅದು ಬೇಡ ಅಷ್ಟೇ ಎನ್ನುವುದು ತಮ್ಮ ನಿಲುವು ಎಂದ ಅವರು, ಮೊದಲು ಇರುವ ದಸರಾವನ್ನೇ ಅಚ್ಚುಕಟ್ಟಾಗಿ ಮಾಡಿ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು. ಕಳೆದ ಮೂರು ವರ್ಷಗಳಿಂದ ದಸರಾ ಯಶಸ್ವಿಯಾಗಿ ನಡೆದಿಲ್ಲ ಮತ್ತು ಪ್ರತಿ ದಸರಾದಲ್ಲೂ ಒಂದಿಲ್ಲೊಂದು ವಿವಾದ ಸೃಷ್ಟಿಯಾಗುತ್ತಿದ್ದು, ವಿವಾದ-ಹೋರಾಟಗಳ ನಡುವೆಯೇ ದಸರಾ ನಡೆಯುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ದಸರಾ ಮಹೋತ್ಸವದ ಪಾಸ್ ವಿತರಣೆ ಗದ್ದಲದ ಕುರಿತು ಮಾತನಾಡಿದ ಸಂಸದರು, ದಸರಾ ವೇಳೆ ಪಾಸ್ ಗಳದ್ದೇ ದೊಡ್ಡ ಗೊಂದಲ ಮತ್ತು ಜಟಪಟಿ ನಡೆಯುವುದರಿಂದ, ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿರುವುದಾಗಿ ತಿಳಿಸಿದರು. ಪಾಸ್ ಬದಲಾಗಿ ಗ್ಲೋಬಲ್ ಟೆಂಡರ್ ಮೂಲಕ ಟಿಕೆಟ್ ಹಂಚಿಕೆ ಮಾಡುವುದು ಸೂಕ್ತ ಎಂದ ಅವರು, ‘ಸರಳ ದಸರಾ’ ಎಂಬ ಹೆಸರು ಬಳಸುವುದರಿಂದ ಮೈಸೂರಿನ ಪ್ರವಾಸೋದ್ಯಮಕ್ಕೆ ಧಕ್ಕೆ ತರುತ್ತದೆ, ಹೀಗಾಗಿ ಆ ಹೆಸರು ಬೇಡ ಎಂದು ಸರ್ಕಾರವನ್ನು ಒತ್ತಾಯಿಸಿದರು.
