ಸರಗೂರು, ಫೆಬ್ರವರಿ 4, 2026 : ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಕಾಡಾನೆಗಳು ಪ್ರತ್ಯಕ್ಷವಾಗುವ ಮೂಲಕ ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿವೆ. ಕಾಡಿನಿಂದ ನಾಡಿಗೆ ಎಂಟ್ರಿ ಕೊಟ್ಟ ಮೂರು ಆನೆಗಳು ಗ್ರಾಮದ ಹೊರವಲಯದಲ್ಲಿ ಬೀಡುಬಿಟ್ಟಿದ್ದವು.

ಆನೆಗಳನ್ನು ಕಂಡ ಗ್ರಾಮಸ್ಥರು ಅವುಗಳನ್ನು ಓಡಿಸಲು ಕಿರುಚಾಡಿ ಸದ್ದು ಮಾಡಿದರೂ ಸಹ, ಗಜಪಡೆ ಯಾವುದಕ್ಕೂ ಜಗ್ಗದೆ ದೀರ್ಘಕಾಲ ಗ್ರಾಮದ ಅಕ್ಕಪಕ್ಕದಲ್ಲೇ ಸಂಚರಿಸಿದವು. ಇದರಿಂದ ಕಂಗೆಟ್ಟ ಸಾರ್ವಜನಿಕರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಸ್ಥಳೀಯರ ಸಹಕಾರದೊಂದಿಗೆ ಹರಸಾಹಸ ಪಟ್ಟು ಆನೆಗಳನ್ನು ಮರಳಿ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಭಾಗದಲ್ಲಿ ಕಾಡುಪ್ರಾಣಿಗಳ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದ್ದು, ಪದೇ ಪದೇ ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ಹಂಚೀಪುರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡುಪ್ರಾಣಿಗಳು ಕಾಡಿನಿಂದ ಹೊರಬರದಂತೆ ಶಾಶ್ವತ ತಡೆಗೋಡೆ ಅಥವಾ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
