ಮೈಸೂರು, ಫೆಬ್ರವರಿ 3, 2026 : ರಾಜ್ಯದಾದ್ಯಂತ ಕಳೆದ ಎರಡು ತಿಂಗಳಿನಿಂದ ಇ-ಖಾತಾ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಿವಕುಮಾರ್ ಕಿಡಿಕಾರಿದ್ದಾರೆ.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಯಾದ ಮೈಸೂರಿನಲ್ಲೂ ಇ-ಖಾತಾ ವ್ಯವಸ್ಥೆ ಸಂಪೂರ್ಣವಾಗಿ ಸ್ತಬ್ಧವಾಗಿದ್ದು, ಐಟಿಬಿಟಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿನ ಹಿರಿಮೆಗೆ ಈ ಅವ್ಯವಸ್ಥೆ ಕಪ್ಪುಚುಕ್ಕೆಯಾಗಿದೆ. ಪ್ರಸ್ತುತ ರಾಜ್ಯ ಸರ್ಕಾರ ತಾಂತ್ರಿಕ ವ್ಯವಸ್ಥೆಯನ್ನು ಉನ್ನತೀಕರಿಸುವ ಬದಲು ಇಡೀ ವ್ಯವಸ್ಥೆಯನ್ನು 20 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿದೆ ಎಂದು ಅವರು ಆರೋಪಿಸಿದರು.
ಇ-ಖಾತಾವನ್ನು ಕಡ್ಡಾಯಗೊಳಿಸುವ ಮೊದಲು ಸರ್ಕಾರ ಅದರ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಿತ್ತು. ಹಂತ ಹಂತವಾಗಿ ಅನುಷ್ಠಾನಕ್ಕೆ ತರುವ ಬದಲು ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದ್ದರಿಂದ ಇಂದು ಜನರು ಪರದಾಡುವಂತಾಗಿದೆ. ಕಾವೇರಿ ತಂತ್ರಾಂಶವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಜನರು ಆಸ್ತಿ ಖರೀದಿ ಮತ್ತು ಮಾರಾಟ ಮಾಡಲು ಸಾಧ್ಯವಾಗದಂತಹ ವಿಷಮ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಸಾರ್ವಜನಿಕರು ಕೋರ್ಟ್ ಮತ್ತು ಕಚೇರಿಗಳಿಗೆ ಅಲೆಯುವಂತಾಗಿದೆ ಎಂದು ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಅನ್ಯ ರಾಜ್ಯಗಳಲ್ಲಿ ಮನೆಯಲ್ಲೇ ಕುಳಿತು ಎಐ (AI) ತಂತ್ರಜ್ಞಾನದ ಮೂಲಕ ಇ-ಖಾತೆ ಪಡೆಯುವ ಸೌಲಭ್ಯವಿದ್ದರೆ, ನಮ್ಮ ರಾಜ್ಯದಲ್ಲಿ ತಾಂತ್ರಿಕ ದೋಷಗಳಿಂದಾಗಿ ಜನರು ಮಧ್ಯವರ್ತಿಗಳ ಪಾಲಾಗುತ್ತಿದ್ದು, ಹಣದ ಸುಲಿಗೆಯಾಗುತ್ತಿದೆ ಎಂದು ಅವರು ದೂರಿದರು.
ಮೈಸೂರು ಮಹಾನಗರ ಪಾಲಿಕೆಯಲ್ಲಿ ವಾರ್ಷಿಕ ಸುಮಾರು 200 ಕೋಟಿ ರೂಪಾಯಿ ಕಂದಾಯ ವಸೂಲಿಯಾಗುತ್ತದೆ. ಆದರೆ ಈಗಿನ ತಾಂತ್ರಿಕ ಸಮಸ್ಯೆಯಿಂದಾಗಿ ಜನರು ತೆರಿಗೆ ಕಟ್ಟಲು ಕೂಡ ಸಾಧ್ಯವಾಗುತ್ತಿಲ್ಲ. ಇದರಿಂದ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಭಾರಿ ಆರ್ಥಿಕ ನಷ್ಟವಾಗುತ್ತಿದೆ. ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ಮೊದಲು ತಮ್ಮ ಇಲಾಖೆಯ ವೈಫಲ್ಯಗಳನ್ನು ಸರಿಪಡಿಸಿಕೊಳ್ಳಲಿ. ಮೈಕ್ರೋಸಾಫ್ಟ್ ಮತ್ತು ಗೂಗಲ್‌ನಂತಹ ಪ್ರತಿಷ್ಠಿತ ಕಂಪನಿಗಳು ರಾಜ್ಯದಿಂದ ಹೊರಹೋಗುತ್ತಿದ್ದು, ಸಾವಿರಾರು ಯುವಕರ ಉದ್ಯೋಗಾವಕಾಶಗಳು ಕೈತಪ್ಪುತ್ತಿವೆ. ಇದಕ್ಕೆ ಸಚಿವರ ವೈಫಲ್ಯವೇ ನೇರ ಕಾರಣ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಬಿ.ವಿ. ಮಂಜುನಾಥ್, ಸುಬ್ಬಯ್ಯ ಹಾಗೂ ರಂಗಸ್ವಾಮಿ ಉಪಸ್ಥಿತರಿದ್ದರು. ಇ-ಖಾತೆ ಕಡ್ಡಾಯ ನಿಯಮವನ್ನು ಸದ್ಯಕ್ಕೆ ಕೈಬಿಟ್ಟು, ಮೊದಲು ಮನೆ ಮನೆಗೆ ಹೋಗಿ ಸರ್ವೇ ನಡೆಸಿ ಡೇಟಾ ಸಂಗ್ರಹಿಸಬೇಕು. ಒಂದು ವಾರದೊಳಗೆ ಈ ತಾಂತ್ರಿಕ ಲೋಪಗಳನ್ನು ಸರಿಪಡಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
