ಮೈಸೂರು, ಜುಲೈ 10, 2026: ಬೆಂಗಳೂರಿನಲ್ಲಿ ನಡೆದ ಯಶಸ್ವಿ ಕಾರ್ಯಾಚರಣೆಯ ಬೆನ್ನಲ್ಲೇ ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯ ಭರದಿಂದ ಆರಂಭವಾಗಿದೆ. ನಗರದಲ್ಲಿ ಜೆಸಿಬಿಗಳು ಘರ್ಜಿಸಲು ಶುರುಮಾಡಿದ್ದು, ಫುಟ್‌ಪಾತ್ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಸಿಬ್ಬಂದಿ ಭರ್ಜರಿ ಶಾಕ್ ನೀಡಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ 5 ರ ವ್ಯಾಪ್ತಿಯ ಕೆ.ಆರ್.ಎಸ್ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ಬೃಹತ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ 30ಕ್ಕೂ ಹೆಚ್ಚು ಪೆಟ್ಟಿಗೆ ಅಂಗಡಿಗಳು, ಶೆಡ್ಡುಗಳು, ತಳ್ಳುವ ಗಾಡಿಗಳು ಹಾಗೂ ರಸ್ತೆ ಬದಿಯ ಜಾಹೀರಾತು ಫಲಕಗಳನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಯಶಸ್ವಿಯಾಗಿ ತೆರವುಗೊಳಿಸಿದ್ದಾರೆ. ಬೆಂಗಳೂರಿನ ಮಾದರಿಯಲ್ಲೇ ಮೈಸೂರಿನಲ್ಲೂ ಮಹಾನಗರ ಪಾಲಿಕೆ ಅಧಿಕಾರಿಗಳು ಸಂಪೂರ್ಣವಾಗಿ ಫೀಲ್ಡ್‌ಗೆ ಇಳಿದಿದ್ದು, ಒತ್ತುವರಿದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
