ಹುಣಸೂರು, ಫೆಬ್ರವರಿ 2, 2026: ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ಮದ್ಯದಂಗಡಿ ತೆರೆಯಲು ನಡೆಸುತ್ತಿರುವ ಪ್ರಯತ್ನಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗ್ರಾಮದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಇಲ್ಲಿ ಬಾರ್ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಬೋಳನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ (PDO) ಮನವಿ ಸಲ್ಲಿಸಲಾಯಿತು.

ಬೋಳನಹಳ್ಳಿ ಮತ್ತು ಹೊಸರಾಮನಹಳ್ಳಿ ಅವಳಿ ಗ್ರಾಮಗಳಂತಿದ್ದು, ಈ ಭಾಗದಲ್ಲಿ ಅಂಚೆ ಕಚೇರಿ, ಬ್ಯಾಂಕ್, ಆಸ್ಪತ್ರೆ, ನ್ಯಾಯಬೆಲೆ ಅಂಗಡಿ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಕಾರ್ಯಾಚರಿಸುತ್ತಿವೆ. ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಿವಿಧ ವ್ಯವಹಾರಗಳಿಗಾಗಿ ಇಲ್ಲಿಗೆ ಆಗಮಿಸುತ್ತಾರೆ. ಇಂತಹ ಶೈಕ್ಷಣಿಕ ಮತ್ತು ಜನನಿಬಿಡ ಕೇಂದ್ರದಲ್ಲಿ ಮದ್ಯದಂಗಡಿ ಪ್ರಾರಂಭವಾದರೆ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಸಂಕಷ್ಟ ಎದುರಾಗಲಿದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಯಶ್ವಂತ್ ಹೆಚ್.ಆರ್. ಮತ್ತು ಹೆಚ್.ಎ. ಮಾಲೇಗೌಡ ಎಂಬುವವರು ಬಾರ್ ತೆರೆಯಲು ಅನುಮತಿ (NOC) ಕೋರಿ ಅರ್ಜಿ ಸಲ್ಲಿಸಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಈ ಅರ್ಜಿಯನ್ನು ತಕ್ಷಣವೇ ತಿರಸ್ಕರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಗ್ರಾಮದ ಹಿತ ಕಾಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಒಂದು ವೇಳೆ ಜನರ ವಿರೋಧದ ನಡುವೆಯೂ ಬಾರ್ ಅಥವಾ ಮದ್ಯದಂಗಡಿ ಪ್ರಾರಂಭಿಸಲು ಅನುಮತಿ ನೀಡಿದಲ್ಲಿ, ರೈತ ಸಂಘ, ಸ್ತ್ರೀ ಶಕ್ತಿ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.
