ಮೈಸೂರು, ಫೆಬ್ರವರಿ 2, 2026 :ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MGNREGA) ಯೋಜನೆಯ ಹೆಸರು ಬದಲಾವಣೆ ಹಾಗೂ ಕೇಂದ್ರದ “ನಿರಾಶಾದಾಯಕ” ಬಜೆಟ್ ಖಂಡಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಘಟಕದ ವತಿಯಿಂದ ನಗರದ ಟೌನ್ ಹಾಲ್ ಮುಂಭಾಗ ಅಹೋರಾತ್ರಿ ಧರಣಿ ಪ್ರತಿಭಟನೆ ಆರಂಭವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು. ಈ ವೇಳೆ ಮಾಜಿ ಸಂಸದ ಉಗ್ರಪ್ಪ, ಮಾಜಿ ಶಾಸಕರಾದ ಜಿ.ಎನ್. ನಂಜುಂಡಸ್ವಾಮಿ, ಸೋಮಶೇಖರ್, ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಹಾಗೂ ನಗರಾಧ್ಯಕ್ಷ ಆರ್. ಮೂರ್ತಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
“ಬಡವರ ಉದ್ಯೋಗದ ಹಕ್ಕಿಗೆ ಧಕ್ಕೆ”

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಮಹದೇವಪ್ಪ, ಕೇಂದ್ರ ಸರ್ಕಾರದ ನೀತಿಗಳನ್ನು ತೀವ್ರವಾಗಿ ಟೀಕಿಸಿದರು. ಕೇವಲ ಹೆಸರನ್ನು ಬದಲಿಸುವ ಮೂಲಕ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಈ ಹಿಂದೆ ಕೇಂದ್ರವೇ ಪೂರ್ಣ ಹಣ ನೀಡುತ್ತಿತ್ತು. ಆದರೆ ಈಗ ಕೇಂದ್ರ 60% ಹಾಗೂ ರಾಜ್ಯ 40% ಪಾಲನ್ನು ಭರಿಸಬೇಕಾದ ಪರಿಸ್ಥಿತಿ ತಂದೊಡ್ಡಲಾಗಿದೆ. ಕೋವಿಡ್ ಸಮಯದಲ್ಲಿ 15 ಕೋಟಿ ಜನರಿಗೆ ಆಸರೆಯಾಗಿದ್ದ ಯೋಜನೆಯನ್ನು ಹಂತಹಂತವಾಗಿ ದುರ್ಬಲಗೊಳಿಸಿ ಜನರ ದುಡಿಯುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. “ಮನ್ ರೇಗಾ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ತೀವ್ರಗೊಳಿಸಲಿದೆ,” ಎಂದು ಅವರು ಎಚ್ಚರಿಸಿದರು.
ಕೇಂದ್ರ ಬಜೆಟ್ 2026: “ದಿಕ್ಕು ದೆಸೆಯಿಲ್ಲದ ಬಜೆಟ್”
ಇದೇ ವೇಳೆ ಕೇಂದ್ರ ಬಜೆಟ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಇದೊಂದು ಸಂಪೂರ್ಣ ನಿರಾಶಾದಾಯಕ ಬಜೆಟ್ ಎಂದರು. ಬಜೆಟ್‌ನಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೂಕ್ತ ಆದ್ಯತೆ ನೀಡದೆ ತಾರತಮ್ಯ ಎಸಗಲಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ವರದಿ ನೀಡಿದ್ದರೂ ಕೇಂದ್ರ ಸರ್ಕಾರ ಯಾವುದೇ ವಿಶೇಷ ಅನುದಾನ ಅಥವಾ ತೀರ್ಮಾನ ಕೈಗೊಂಡಿಲ್ಲ. ಜನರ ನಿರೀಕ್ಷೆಗಳು ಈ ಬಜೆಟ್‌ನಿಂದ ಹುಸಿಯಾಗಿದ್ದು, ಕೇವಲ ಘೋಷಣೆಗಳಿಗಷ್ಟೇ ಬಜೆಟ್ ಸೀಮಿತವಾಗಿದೆ ಎಂದು ಲೇವಡಿ ಮಾಡಿದರು.
