ಮೈಸೂರು, ಜುಲೈ 3, 2026 : ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಎನ್.ಆರ್. ವಿಧಾನಸಭಾ ಕ್ಷೇತ್ರದಲ್ಲಿ ಲೋಪದೋಷಗಳು ಕಂಡುಬರುತ್ತಿವೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡರಾದ ಸಂದೇಶ್ ಸ್ವಾಮಿ ಹಾಗೂ ಗಿರಿಧರ್, ಎನ್.ಆರ್. ಕ್ಷೇತ್ರದಲ್ಲಿ SIR ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಬಿಎಲ್ಒ ಅಧಿಕಾರಿಗಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಡ ಹಾಗೂ ಬೆದರಿಕೆ ಹಾಕುತ್ತಿರುವ ಆರೋಪ ಮಾಡಿರುವ ಅವರು, ಗುಂಪು ಗುಂಪಾಗಿ ಅರ್ಜಿ ನಮೂನೆಗಳನ್ನು (ಫಾರಂ) ಹಂಚಲಾಗುತ್ತಿದ್ದು, ಇದರಿಂದ SIR ಪ್ರಕ್ರಿಯೆಯ ಪಾರದರ್ಶಕತೆಗೆ ಧಕ್ಕೆಯಾಗುತ್ತಿದೆ ಎಂದು ಹೇಳಿದರು.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ, ನಿಯಮಾನುಸಾರ ಹಾಗೂ ಪಾರದರ್ಶಕವಾಗಿ SIR ಪ್ರಕ್ರಿಯೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
