ಹೆಚ್.ಡಿ.ಕೋಟೆ, ಜೂನ್ 30, 2026: ಜೂನ್ ತಿಂಗಳು ಅಂತ್ಯವಾಗುತ್ತಿದ್ದರೂ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಕಂಗಾಲಾಗಿರುವ ಜನರು ಮಳೆಗಾಗಿ ವಿವಿಧ ರೀತಿಯ ಆಚರಣೆಗಳ ಮೊರೆ ಹೋಗುತ್ತಿದ್ದಾರೆ. ಅದರ ಭಾಗವಾಗಿ ಹೆಚ್.ಡಿ.ಕೋಟೆ ತಾಲೂಕಿನ ತುಂಬಸೋಗೆ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಮಕ್ಕಳು ಸಂಪ್ರದಾಯಬದ್ಧವಾಗಿ ಕಪ್ಪೆ ಮೆರವಣಿಗೆ ನಡೆಸಿ ಮಳೆಗಾಗಿ ಪ್ರಾರ್ಥಿಸಿದರು.

ಗ್ರಾಮದ ತೋಟದ ಬಾವಿಯಿಂದ ಕಪ್ಪೆಯನ್ನು ತಂದು ಒನಕೆಯ ಮೇಲೆ ಇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಕಪ್ಪೆಗೆ ಸ್ನಾನ ಮಾಡಿಸಿ ಅರಿಶಿನ–ಕುಂಕುಮ ಹಚ್ಚಿ ಪೂಜಿಸಲಾಯಿತು. ಸಂಪ್ರದಾಯದಂತೆ ಮಕ್ಕಳು ಮೈಗೆ ಸೊಪ್ಪು ಕಟ್ಟಿಕೊಂಡು, “ಉಯ್ಯೋ ಉಯ್ಯೋ ಮಳೆರಾಯ, ಹೂವಿನ ತೋಟಕ್ಕೆ ನೀರಿಲ್ಲ” ಎಂದು ಹಾಡುತ್ತಾ ತಮಟೆ ಬಾರಿಸಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಪ್ಪೆ ಮೆರವಣಿಗೆ ನಡೆಸಿದರು.
ಬಳಿಕ ಗ್ರಾಮದ ಅಧಿದೇವತೆ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಉತ್ತಮ ಮಳೆಯಾಗಿ ರೈತರ ಬದುಕು ಸುಧಾರಿಸಲಿ ಎಂದು ಪ್ರಾರ್ಥಿಸಿದರು. ಗ್ರಾಮಸ್ಥರು ಸಂಗ್ರಹಿಸಿದ ದವಸ-ಧಾನ್ಯಗಳಿಂದ ಅಡುಗೆ ತಯಾರಿಸಿ ಅನ್ನಸಂತರ್ಪಣೆಯನ್ನೂ ಏರ್ಪಡಿಸಿದರು.
ಮೈಸೂರು ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಬರದ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಉತ್ತಮ ಮಳೆಯಾಗಲಿ ಎಂಬ ಆಶಯದೊಂದಿಗೆ ಗ್ರಾಮಸ್ಥರು ಈ ಸಂಪ್ರದಾಯವನ್ನು ಆಚರಿಸಿರುವುದು ಗಮನಾರ್ಹವಾಗಿದೆ.
