ಮೈಸೂರು, ಜನವರಿ 20, 2026:ಮೈಸೂರು ನಗರದ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಯುವಕ ಶಹಬಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಎರಡು ಗುಂಪುಗಳ ನಡುವೆ ಇದ್ದ ಹಳೆಯ ದ್ವೇಷವೇ ಈ ಕೊಲೆಗೆ ಪ್ರಮುಖ ಕಾರಣವಾಗಿದ್ದು, ಕಳೆದ ಮಧ್ಯರಾತ್ರಿ ಈ ಕೃತ್ಯ ನಡೆದಿದೆ. ಮೃತನ ಮನೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಆಟೋಗಳನ್ನು ನಿಲ್ಲಿಸಲಾಗುತ್ತಿತ್ತು ಮತ್ತು ಒಂದು ಆಟೋಗೆ ದಿನಕ್ಕೆ 20 ರೂಪಾಯಿ ಕಲೆಕ್ಟ್ ಮಾಡುವ ವಿಚಾರದಲ್ಲಿ ಈ ಹಿಂದೆ ಗಲಾಟೆ ನಡೆದಿತ್ತು. ಹಣಕಾಸಿನ ವಿಚಾರ ಹಾಗೂ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದ್ದು, ಸದ್ಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತ ಯುವಕನ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಹಾಗೂ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಅರಣ್ಯ ವಲಯಾಧಿಕಾರಿ (RFO) ಕಾಂತರಾಜ್ ಚೌಹಾಣ್ ಅವರು ಶವವಾಗಿ ಪತ್ತೆಯಾಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಸಾವಿಗೆ ನಿಖರವಾದ ಕಾರಣವೇನೆಂದು ಸದ್ಯಕ್ಕೆ ತಿಳಿದು ಬಂದಿಲ್ಲ. ಮೃತರ ಸಂಬಂಧಿಕರು ಈಗಾಗಲೇ ಮೈಸೂರಿಗೆ ಆಗಮಿಸಿದ್ದು, ಕುಟುಂಬಸ್ಥರು ನೀಡುವ ದೂರಿನ ಆಧಾರದ ಮೇಲೆ ಮುಂದಿನ ತನಿಖೆ ಕೈಗೊಳ್ಳಲಾಗುವುದು. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿನ ಹಿಂದಿನ ಅಸಲಿ ಕಾರಣ ಬಯಲಾಗಲಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ.
