ಕಲಬುರಗಿ, ಜನವರಿ 16,2026 : ಕಲಬುರಗಿಯ ಜೇವರ್ಗಿ ತಹಶೀಲ್ದಾರ್ ವಿರುದ್ಧ ಸಿಬ್ಬಂದಿ ಬಳಿ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಆಡಿಯೋ ವೈರಲ್ ಆಗಿದೆ. ಸಿಬ್ಬಂದಿ ಮೇಲಾಧಿಕಾರಿಗಳಿಗೆ ದೂರು ಕೂಡ ನೀಡಿದ್ದಾರೆ. ಆದರೆ, ತಹಶೀಲ್ದಾರ್ ಆರೋಪಗಳನ್ನು ನಿರಾಕರಿಸಿದ್ದು, 6 ತಿಂಗಳ ಹಿಂದೆ ಅಮಾನತಾದ ವಿಎ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನನ್ನ ಹೆಸರಿನಲ್ಲಿ ನೀವು ಹಣ ಮಾಡ್ತೀರಿ, ಹಾಗಾಗಿ ನನಗೂ ಹಣ ನೀಡಿ ಎಂದು ತಹಶೀಲ್ದಾರ್ ಮಲ್ಲಣ್ಣ ಸಿಬ್ಬಂದಿಗೆ ಆವಾಜ್ ಹಾಕಿದ್ದಾರೆ ಎಂದು ದೂರಲಾಗಿದೆ. ತಹಶೀಲ್ದಾರ್ ಕಿರುಕುಳಕ್ಕೆ ಬೇಸತ್ತು RI ಜವಾಬ್ದಾರಿಯೇ ಬೇಡ, ನನ್ನನು ಕಚೇರಿ ಕೆಲಸಕ್ಕೆ ಹಾಕಿ, ನನಗೆ ಹಣ ನೀಡಲು ಆಗಲ್ಲ ಎಂದ ಸಿಬ್ಬಂದಿ ಅಲವತ್ತುಕೊಂಡಿದ್ದಾರೆ. ಸರ್ಕಾರಿ ಜಯಂತಿಗಳು, ಶಾಸಕರು ಹೇಳುವ ಕೆಲಸಗಳಿಗೆಲ್ಲ ನಾವು ಹಣ ಕೊಡಬೇಕು. ನಾವು ದುಡ್ಡನ್ನು ಎಲ್ಲಿಂದ ಕೊಡೋದು? ಎಂದು ತಹಶೀಲ್ದಾರ್ ಮಲ್ಲಣ್ಣಗೆ ಸಿಬ್ಬಂದಿ ಪ್ರಶ್ನೆ ಹಾಕಿದ್ದರೂ ಎಲ್ಲಾ ಇಲಾಖೆಯವರು ಹಣ ಕೊಡ್ತಾರೆ ನೀವು ಕೊಡಿ ಎಂದು ಮಲ್ಲಣ್ಣ ಹೇಳಿದ್ದಾರೆ. ಇಲ್ಲವಾದರೆ ನಿಮ್ಮ ವಿರುದ್ಧ ತನಿಖೆಗೆ ಆದೇಶಿಸುವೆ ಎಂದು ಬೆದರಿಕೆಯನ್ನೂ ಹಾಕಿರೋದಾಗಿ ಸಿಬ್ಬಂದಿ ದೂರಿದ್ದಾರೆ.
ತಹಶೀಲ್ದಾರ್ ಸ್ಪಷ್ಟನೆ
ಇನ್ನು ತಮ್ಮ ಮೇಲೆ ಕೇಲಿಬಂದಿರುವ ಆರೋಪಗಳ ಕುರಿತು ಜೇವರ್ಗಿ ತಹಶೀಲ್ದಾರ ಮಲ್ಲಣ್ಣ ಯಲಗೋಡ್ ಪ್ರತಿಕ್ರಿಯಿಸಿದ್ದಾರೆ. 6 ತಿಂಗಳ ಹಿಂದೆ ಕನ್ನಡಭವನದಲ್ಲಿ ನಡೆದಿದ್ದ ಕಾರ್ಯಕ್ರಮ ಅಸ್ತವ್ಯಸ್ತವಾಗಿತ್ತು. ಈ ಬಗ್ಗೆ ನಾನು ಸಿಬ್ಬಂದಿ ಜೊತೆ ಸಭೆಯಲ್ಲಿ ಚರ್ಚಿಸಿದ್ದೇನೆಯೇ ಹೊರತು, ಯಾವ ಸಿಬ್ಬಂದಿ ಬಳಿಯೂ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಶರಣು ಎಂಬ ವಿಎಯನ್ನು 6 ತಿಂಗಳ ಹಿಂದೆ ಅಮಾನತು ಮಾಡಿದ್ದು, ಆತನೇ ಇದನ್ನೆಲ್ಲ ಮಾಡಿ ಎಲ್ಲ ಕಡೆ ದೂರು ಕೊಟ್ಟಿದ್ದಾನೆ. ನಾನು ಹಣ ಕೇಳಿದ್ರೆ ಎಲ್ಲ ಸಿಬ್ಬಂದಿ ಸೇರಿ ದೂರು ಕೊಡಬಹುದಾಗಿತ್ತು. ಈ ಹಿಂದಿನ ತಹಶೀಲ್ದಾರ್ ಅವರಿಗೂ ಆತ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಅದೇ ರೀತಿ ನನಗೂ ಸಹ ಬ್ಲ್ಯಾಕ್‌ಮೇಲ್ ಮಾಡಲು ಬಂದಿದ್ದಾನೆ. ಆದರೆ ಆತನ ಬೆದರಿಕೆಗೆ ನಾನು ಹೆದರಿಲ್ಲ ಎಂದು ತಿಳಿಸಿದ್ದಾರೆ.
