ಮೈಸೂರು, ಜನವರಿ 16, 2026: ಬಿಜೆಪಿ ರಾಷ್ಟ್ರೀಯ ನಾಯಕರ ವಿರುದ್ಧ ಆಧಾರರಹಿತ ಸುಳ್ಳು ಆರೋಪಗಳನ್ನು ಮಾಡಿರುವ ರಾಜ್ಯ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ನಿಯೋಗವು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರಿಗೆ ದೂರು ಸಲ್ಲಿಸಿದೆ.
ಶಾಸಕ ಟಿ.ಎಸ್. ಶ್ರೀವತ್ಸ ಹಾಗೂ ನಗರಾಧ್ಯಕ್ಷ ಎಲ್. ನಾಗೇಂದ್ರ ಅವರ ನೇತೃತ್ವದ ಈ ನಿಯೋಗವು, ಲಕ್ಷ್ಮಣ್ ಅವರ ನಡೆ ಸಾರ್ವಜನಿಕವಾಗಿ ಅಶಾಂತಿ ಮತ್ತು ದ್ವೇಷವನ್ನು ಪ್ರಚೋದಿಸುವಂತಿದೆ ಎಂದು ಗಂಭೀರವಾಗಿ ಆರೋಪಿಸಿದೆ.

ಕಳೆದ ಜನವರಿ 8 ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರು, ಬಳ್ಳಾರಿ ಘಟನೆಯ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆ ಇದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ ಅಮಿತ್ ಶಾ ಅವರ ಸಂದೇಶ ಹೊತ್ತು ತಂದಿರುವ ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ಕೂಡಲೇ ಬ್ರೇನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದರು. ಈ ರೀತಿಯ ಪ್ರಚೋದನಾತ್ಮಕ ಪದಗಳನ್ನು ಯಾವುದೇ ದಾಖಲೆ ಅಥವಾ ಪುರಾವೆಗಳಿಲ್ಲದೆ ಬಳಸಿರುವುದು ಸಾರ್ವಜನಿಕ ವಲಯದಲ್ಲಿ ಕಿಡಿಗೇಡಿತನಕ್ಕೆ ಕಾರಣವಾಗುತ್ತಿದೆ ಎಂದು ಬಿಜೆಪಿ ತನ್ನ ದೂರಿನಲ್ಲಿ ವಿವರಿಸಿದೆ.
ತಪ್ಪು ಮಾಹಿತಿಯ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿರುವ ಎಂ. ಲಕ್ಷ್ಮಣ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿರುವ ಬಿಜೆಪಿ ನಾಯಕರು, ಸಮಾಜದಲ್ಲಿ ಶಾಂತಿ ಕದಡುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪೊಲೀಸ್ ಆಯುಕ್ತರನ್ನು ಆಗ್ರಹಿಸಿದ್ದಾರೆ.
