ತುಮಕೂರು, ಜನವರಿ 9, 2026 : ಜಿಲ್ಲೆಯ ಕೋರಾ ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಇಂದು ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಶಬರಿಮಲೆಯಿಂದ ವಾಪಸ್ಸಾಗುತ್ತಿದ್ದ ನಾಲ್ವರು ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದ 11 ಮಂದಿ ಭಕ್ತರ ತಂಡವು ಶಬರಿಮಲೆ ಯಾತ್ರೆ ಮುಗಿಸಿ ಕ್ರೂಸರ್ ವಾಹನದಲ್ಲಿ ಸ್ವಗ್ರಾಮಕ್ಕೆ ಮರಳುತ್ತಿತ್ತು. ಈ ವೇಳೆ ವಸಂತನರಸಾಪುರ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.
ಮೃತರೆಲ್ಲರೂ ಕೊಪ್ಪಳ ಜಿಲ್ಲೆಯ ಯಲಬುರ್ಗಾ ನಿವಾಸಿಗಳಾಗಿದ್ದು, ಅವರನ್ನು ಈ ಕೆಳಗಿನಂತೆ ಗುರುತಿಸಲಾಗಿದೆ:ಸಾಕ್ಷಿ (7 ವರ್ಷ) – ಒಂದನೇ ತರಗತಿ ವಿದ್ಯಾರ್ಥಿನಿ, ವೆಂಕಟೇಶಪ್ಪ (30 ವರ್ಷ), ಮಾರತಪ್ಪ (35 ವರ್ಷ), ಗವಿಸಿದ್ದಪ್ಪ (40 ವರ್ಷ) ಮೃತಪಟ್ಟ ದುರ್ದೈವಿಗಳು.
ಅಪಘಾತದಲ್ಲಿ ಗಾಯಗೊಂಡ ಪ್ರಶಾಂತ್ (32), ಪ್ರವೀಣ್ ಕುಮಾರ್ (28), ರಾಜಪ್ಪ (45), ಉಲಗಪ್ಪ (32), ರಾಕೇಶ್ (24), ತಿರುಪತಿ (33) ಮತ್ತು ಶ್ರೀನಿವಾಸ್ (32) ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಅಪಘಾತದಲ್ಲಿ ಮೃತಪಟ್ಟ ಏಳು ವರ್ಷದ ಬಾಲಕಿ ಸಾಕ್ಷಿಯ ತಂದೆ ಉಲಗಪ್ಪ ಅವರು ಗಾಯಗೊಂಡಿದ್ದು, ಮಗಳನ್ನು ಕಳೆದುಕೊಂಡು ಆಸ್ಪತ್ರೆಯಲ್ಲಿ ಗೋಳಾಡುತ್ತಿದ್ದಾರೆ. “ಎರಡನೇ ಬಾರಿ ಮಗಳನ್ನು ಶಬರಿಮಲೆಗೆ ಕರೆದೊಯ್ದಿದ್ದೆವು. ಒಳ್ಳೆಯದಾಗಲಿ ಎಂದು ದೇವರ ದರ್ಶನ ಮಾಡಿ ಬರುತ್ತಿದ್ದೆವು. ನನ್ನ ಪಕ್ಕದಲ್ಲೇ ಮಲಗಿದ್ದ ಮಗಳು ಈಗ ಹೆಣವಾಗಿದ್ದಾಳೆ” ಎಂದು ಅವರು ಕಣ್ಣೀರು ಹಾಕಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಕೋರಾ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
