ಮೈಸೂರು, ಜನವರಿ 6, 2025 : ಮೈಸೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದ ಹಲವು ಪ್ರಮುಖ ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಹೈಕಮಾಂಡ್ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದ್ದು, ತಾವೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುವ ಭರವಸೆ ವ್ಯಕ್ತಪಡಿಸಿದ ಅವರು, ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ಹೈಕಮಾಂಡ್‌ಗೆ ಇದೆ ಮತ್ತು ಅವರ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

ರಾಜಕೀಯ ದಾಖಲೆಗಳ ಬಗ್ಗೆ ಮಾತನಾಡುತ್ತಾ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಸುದೀರ್ಘ ಆಡಳಿತದ ದಾಖಲೆಯನ್ನು ಸರಿಗಟ್ಟುವ ಬಗ್ಗೆ ತಮಗೆ ಈ ಮೊದಲು ಅರಿವಿರಲಿಲ್ಲ ಎಂದು ತಿಳಿಸಿದರು. ಯಾವುದೇ ದಾಖಲೆ ಮುರಿಯುವ ಉದ್ದೇಶ ತಮಗಿರಲಿಲ್ಲ, ಕೇವಲ ಜನರ ಆಶೀರ್ವಾದದಿಂದ ಈ ಹಂತಕ್ಕೆ ಬಂದಿರುವುದಾಗಿ ಹೇಳಿದ ಅವರು, ದೇವರಾಜ ಅರಸು ಅವರ ಕಾಲದ ರಾಜಕಾರಣವೇ ಬೇರೆ, ಇಂದಿನ ಸಮಯವೇ ಬೇರೆ ಎಂದು ಅಭಿಪ್ರಾಯಪಟ್ಟರು. ಆರಂಭದಲ್ಲಿ ಕೇವಲ ಒಂದು ಬಾರಿ ಶಾಸಕರಾದರೆ ಸಾಕು ಎಂದುಕೊಂಡಿದ್ದ ತಮಗೆ ಶಾಸಕ, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ತೃಪ್ತಿ ನೀಡಿದೆ ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯದ ಹಲವೆಡೆ ತಮ್ಮ ಹೆಸರಿನಲ್ಲಿ ‘ನಾಟಿಕೋಳಿ ಪಲಾವ್’ ಹಂಚುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಯಾರು ಊಟ ಹಂಚುತ್ತಿದ್ದಾರೆಂಬ ಮಾಹಿತಿ ನನಗಿಲ್ಲ ಎಂದರು. ತಾವು ಹಳ್ಳಿಯಿಂದ ಬಂದವರಾದ ಕಾರಣ ನಾಟಿಕೋಳಿ ಊಟ ತಮಗೆ ಇಷ್ಟ, ಅದೇ ರೀತಿ ಗ್ರಾಮೀಣ ಭಾಗದ ಜನರಿಗೂ ಇದು ಅಚ್ಚುಮೆಚ್ಚು. ಈ ಹಿಂದೆ ತಾವು ಹೆಚ್ಚಾಗಿ ನಾಟಿಕೋಳಿ ಸೇವಿಸುತ್ತಿದ್ದರೂ, ಈಗ ಅದನ್ನು ಕಡಿಮೆ ಮಾಡಿರುವುದಾಗಿ ಅವರು ಹಾಸ್ಯದ ಚಟಾಕಿ ಹಾರಿಸಿದರು.
ದೆಹಲಿ ನಾಯಕರ ಭೇಟಿಯ ಬಗ್ಗೆ ಮಾಹಿತಿ ನೀಡಿದ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದಾಗ ಸೌಜನ್ಯಕ್ಕಾಗಿ ಭೇಟಿಯಾಗಿದ್ದೆ ಅಷ್ಟೆ. ಆ ಸಮಯದಲ್ಲಿ ಯಾವುದೇ ರಾಜಕೀಯ ಚರ್ಚೆ ಅಥವಾ ಸಂಪುಟ ಪುನರ್‌ರಚನೆಯ ಬಗ್ಗೆ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು. ಸಂಪುಟ ಪುನರ್‌ರಚನೆಗೆ ಸಂಬಂಧಿಸಿದಂತೆ ಹೈಕಮಾಂಡ್ ಯಾವಾಗ ದೆಹಲಿಗೆ ಕರೆಯುತ್ತದೋ ಆಗ ಹೋಗುವುದಾಗಿ ತಿಳಿಸಿದ ಅವರು, ಮುಂಬರುವ ಬಜೆಟ್‌ನಲ್ಲಿ ಏನೇನು ವಿಶೇಷತೆಗಳಿರಲಿವೆ ಎಂಬುದನ್ನು ಕಾದು ನೋಡಿ ಎಂದರು.
ಕೊನೆಯದಾಗಿ ಬಳ್ಳಾರಿ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ಈ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅನಗತ್ಯವಾಗಿ ರಾಜಕಾರಣ ಮಾಡುತ್ತಿವೆ ಎಂದು ಟೀಕಿಸಿದರು. ಪ್ರಕರಣದ ಬಗ್ಗೆ ಪ್ರಸ್ತುತ ತನಿಖೆ ನಡೆಯುತ್ತಿದ್ದು, ವರದಿ ಬಂದ ನಂತರವಷ್ಟೇ ಪ್ರತಿಕ್ರಿಯಿಸುವುದಾಗಿ ಹೇಳಿದರು. ಈ ಪ್ರಕರಣವನ್ನು ಸಿಒಡಿ (COD) ತನಿಖೆಗೆ ಒಪ್ಪಿಸುವ ಬಗ್ಗೆ ಇಂದು ಬೆಂಗಳೂರಿಗೆ ಮರಳಿದ ನಂತರ ಗೃಹ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
