ಬೆಂಗಳೂರು, ಡಿಸೆಂಬರ್ 31, 2025 : ನ್ಯೂ ಇಯರ್ ಸೆಲೆಬ್ರೇಷನ್ ಅಂತ ಸಿಕ್ಕಾಪಟ್ಟೆ ಐಡಿಯಾ ಮಾಡಿಕೊಂಡಿರೋ ಜನರಿಗೆ ಕೊಂಚ ಶಾಕ್ ಎದುರಾಗಿದೆ. ಭದ್ರತೆ ದೃಷ್ಟಿಯಿಂದ ಅನೇಕ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಬೆಂಗಳೂರು ಸಮೀಪದ ನಂದಿಗಿರಿಧಾಮ, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸೇರಿ ವಿವಿಧ ಪ್ರವಾಸಿ ತಾಣಗಳಿಗೆ ಟೂರಿಸ್ಟ್ಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.ಇದರ ಜತೆಗೆ ಬಂಡೀಪುರದಲ್ಲೂ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದ್ದು, ಮೋಜು ಮಸ್ತಿ ಪ್ರಿಯರಿಗೆ ನಿರಾಸೆ ಉಂಟಾಗಿದೆ.
ನಂದಿಗಿರಿಧಾಮಕ್ಕೆ ಡಿ.31ರ ಮಧ್ಯಾಹ್ನ 2ರಿಂದ ಜ.1ರ ಬೆಳಿಗ್ಗೆ 10 ಗಂಟೆಯವರೆಗೆ ಬಂದ್ ಆಗಿರಲಿದೆ. ಅತಿಥಿಗೃಹ ಬುಕ್ ಮಾಡಿದವರನ್ನು ಹೊರತುಪಡಿಸಿ ಉಳಿದ ಪ್ರವಾಸಿಗರಿಗೆ ನಿಷೇಧ ವಿಧಿಸಲಾಗಿದೆ.
ಇನ್ನು,ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಜಿಲ್ಲಾಡಳಿತ ಅಲರ್ಟ್ ಆಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸೇರಿ ಪ್ರವಾಸಿತಾಣಗಳಿಗೆ ಡಿ.31ರ ಸಂಜೆ 6 ಗಂಟೆಯಿಂದ ಜ.1ರ ಬೆಳಗ್ಗೆ 6 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರವಾಸಿ ಸ್ಥಾಳಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಹಾಗೆಯೇ ಕರ್ನಾಟಕದ ಪ್ರಸಿದ್ಧ ವನ್ಯಜೀವಿಧಾಮಗಳಲ್ಲಿ ಒಂದಾದ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ನೂತನ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ. ಈಗಾಗಲೇ ಹುಲಿ ದಾಳಿಯಿಂದ ಸಫಾರಿಗೂ ಸಹ ಬ್ರೇಕ್ ಬಿದ್ದಿದ್ದು, ಜನರಿಗೆ ನಿರಾಸೆ ಉಂಟಾಗಿದೆ.
ಬಂಡೀಪುರದ ಅರಣ್ಯ ಇಲಾಖೆ ಕಾಟೇಜ್‌ಗಳಲ್ಲೂ ವಾಸ್ತವ್ಯಕ್ಕೆ ಬ್ರೇಕ್ ಹಾಕಲಾಗಿದೆ. ಅಲ್ಲದೆ ಅರಣ್ಯ ಇಲಾಖೆ ಗೈಡ್‌ಲೈನ್ಸ್ ರಿಲೀಸ್ ಮಾಡಿದ್ದು, ರೂಲ್ಸ್ ಕಾಪಾಡುವಂತೆ ಸೂಚಿಸಲಾಗಿದೆ.
ಖಾಸಗಿ ರೆಸಾರ್ಟ್‌ಗಳು, ಹೋಂ ಸ್ಟೇಗಳು ರಾತ್ರಿ 10 ಗಂಟೆಗೆ ಬಂದ್ ಆಗಲಿದೆ. ಫೈರ್ ಕ್ಯಾಂಪ್ ಹಾಕುವಂತಿಲ್ಲ.ಅಧಿಕ ಪ್ರಮಾಣದ ಶಬ್ದ ಮಾಡುವಂತಿಲ್ಲ ಹಾಗೂ ಲೈಟಿಂಗ್ಸ್, ಡಿಜೆ ಬಳಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
ಇನ್ನು, ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟಕ್ಕೂ ಡಿಸೇಂಬರ್ 31 ರಂದು ಸಂಜೆ 7 ಗಂಟೆಯಿಂದ ಪ್ರವೇಶ ನಿಷೇಧ ಹೇರಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.
