ಮೈಸೂರು, ಡಿಸೆಂಬರ್ 29, 2025 : ಕ್ರಿಸ್‌ಮಸ್ ಹಬ್ಬದ ರಜೆ ಹಾಗೂ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಐತಿಹಾಸಿಕ ಪಂಚಲಿಂಗಗಳ ಪುಣ್ಯಕ್ಷೇತ್ರ ತಲಕಾಡಿಗೆ ಪ್ರವಾಸಿಗರ ದಂಡೇ ಹರಿದುಬಂದಿದೆ. ಸಾಲು ಸಾಲು ರಜೆಗಳ ಕಾರಣದಿಂದಾಗಿ ತಲಕಾಡು, ನಿಸರ್ಗಧಾಮ ಸೇರಿದಂತೆ ಮೈಸೂರಿನ ಇನ್ನಿತರ ಪ್ರವಾಸಿ ತಾಣಗಳು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿದೆ.

ಕಳೆದ ಎರಡು ದಿನಗಳಿಂದ ತಲಕಾಡಿನತ್ತ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಇಲ್ಲಿನ ಪ್ರಸಿದ್ಧ ದೇವಸ್ಥಾನಗಳ ಕಡೆಗೆ ಹೆಚ್ಚಿನ ಜನಸಂದಣಿ ಕಂಡುಬರುತ್ತಿದೆ. ಮರಳುಗಾಡಿನ ಸೌಂದರ್ಯ ಸವಿಯಲು ಹಾಗೂ ಪವಿತ್ರ ದೇವಸ್ಥಾನಗಳ ದರ್ಶನ ಪಡೆಯಲು ರಾಜ್ಯದ ವಿವಿಧೆಡೆಯಿಂದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಬಿರುಬಿಸಿಲ ನಡುವೆಯೂ ಪ್ರವಾಸಿಗರು ಹರಿಯುವ ಕಾವೇರಿ ನದಿಯಲ್ಲಿ ಮಿಂದೆದ್ದು ಸಂಭ್ರಮಿಸುತ್ತಿದ್ದಾರೆ. ನದಿಯ ತಟದಲ್ಲಿ ಆಟವಾಡುವುದು, ತೆಪ್ಪ ಸವಾರಿ ಮಾಡುವುದು ಹಾಗೂ ಕುಟುಂಬದವರೊಂದಿಗೆ ನಿಸರ್ಗದ ಮಡಿಲಲ್ಲಿ ಕಾಲ ಕಳೆಯುವ ಮೂಲಕ ಪ್ರವಾಸಿಗರು ಖುಷಿಪಡುತ್ತಿದ್ದಾರೆ.

ಒಮ್ಮೆಲೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ಆಗಮಿಸಿದ ಹಿನ್ನೆಲೆಯಲ್ಲಿ, ತಲಕಾಡು ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಹಾಗೂ ಪಾರ್ಕಿಂಗ್ ಪ್ರದೇಶಗಳಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
