ಮೈಸೂರು, ಡಿಸೆಂಬರ್ 29, 2025 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿನಲ್ಲೇ ಈಗ ‘ದಲಿತ ಮುಖ್ಯಮಂತ್ರಿ’ ಕೂಗು ಜೋರಾಗಿ ಕೇಳಿಬರುತ್ತಿದೆ. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಅಭಿಮಾನಿಗಳು ಹಾಗೂ ಡಿ. ದೇವರಾಜ ಅರಸು ಅಭಿಮಾನಿಗಳ ಸಂಘದ ಅಧ್ಯಕ್ಷ ಬಿಳಿಕೆರೆ ರಾಜು ಅವರು, ರಾಜ್ಯದಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಮತ್ತು ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕು ಎಂದು ಬಲವಾಗಿ ಒತ್ತಾಯಿಸಿದರು.
2013ರಲ್ಲೇ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶವಿತ್ತು, ಆದರೆ ಅಂದು ಅವರನ್ನು ವ್ಯವಸ್ಥಿತವಾಗಿ ಹೇಗೆ ಸೋಲಿಸಲಾಯಿತು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ದಲಿತ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ದಲಿತರು ನಿರಂತರವಾಗಿ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದ್ದರೂ ಅವರಿಗೆ ಸಿಎಂ ಸ್ಥಾನ ಪ್ರತಿ ಬಾರಿ ಕೈತಪ್ಪುತ್ತಿದೆ. ಅನ್ಯಾಯವಾದರೂ ಸಮುದಾಯದ ಯಾರೂ ಪಕ್ಷ ಬಿಟ್ಟು ಹೋಗಿಲ್ಲ, ಆದರೆ ಈಗ ಹಕ್ಕು ಕೇಳುವ ಕಾಲ ಬಂದಿದೆ ಎಂದು ಅವರು ಪ್ರತಿಪಾದಿಸಿದರು. ಮೈಸೂರಿನಲ್ಲಿ ನಡೆಯಲಿರುವ ಅಹಿಂದ ಸಮಾವೇಶದ ಕುರಿತು ಮಾತನಾಡಿದ ಅವರು, ಕೇವಲ ಒಬ್ಬರೇ ಲೀಡರ್ ಆಗಬೇಕು ಎನ್ನುವುದು ಭ್ರಮೆಯಷ್ಟೇ. ಅಹಿಂದ ಹೆಸರಿನಲ್ಲಿ ಅಧಿಕಾರ ಪಡೆದು ನೀವೇ ಅನುಭವಿಸುವುದು ಸರಿಯಲ್ಲ, ಸಮುದಾಯಕ್ಕೂ ಅಧಿಕಾರ ಹಂಚಿಕೆಯಾಗಲಿ ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೊಡ್ಡ ಮನಸ್ಸು ಮಾಡಿ ದಲಿತರಿಗೆ ಅಧಿಕಾರ ಬಿಟ್ಟುಕೊಡಬೇಕು ಮತ್ತು ಡಾ. ಜಿ. ಪರಮೇಶ್ವರ್ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಅವರೇ ಘೋಷಿಸಬೇಕು ಎಂದು ಆಗ್ರಹಿಸಿದರು. ಪರಮೇಶ್ವರ್ ಅವರಿಗೆ ಅಧಿಕಾರ ನೀಡುವುದಾದರೆ ಮಾತ್ರ ನಾವು ಮೈಸೂರಿನ ಅಹಿಂದ ಸಮಾವೇಶದಲ್ಲಿ ಭಾಗಿಯಾಗುತ್ತೇವೆ, ಇಲ್ಲವಾದರೆ ನಾವು ಅದರಿಂದ ದೂರ ಉಳಿಯುತ್ತೇವೆ ಎಂದು ಎಚ್ಚರಿಸಿದರು. ಇದರ ಜೊತೆಗೆ, ಮೈಸೂರಿನಲ್ಲಿ ಶೀಘ್ರದಲ್ಲೇ ಬೃಹತ್ ದಲಿತ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಮತ್ತು ಈ ಮೂಲಕ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ಬಿಳಿಕೆರೆ ರಾಜು ತಿಳಿಸಿದರು.
