ಹುಣಸೂರು, ಡಿಸೆಂಬರ್ 26, 2025: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಾದ್ಯಂತ ಹುಲಿ ದಾಳಿ ಪ್ರಕರಣಗಳು ಮಿತಿಮೀರಿದ್ದು, ಒಂದೇ ದಿನ ಎರಡು ಪ್ರತ್ಯೇಕ ಕಡೆಗಳಲ್ಲಿ ಹುಲಿ ದಾಳಿ ನಡೆಸಿ ಜಾನುವಾರುಗಳನ್ನು ಬಲಿ ಪಡೆದಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಗುರುಪುರದಲ್ಲಿ ಎತ್ತು ಬಲಿ – ರಸ್ತೆ ತಡೆ ಪ್ರತಿಭಟನೆ
ಹುಣಸೂರು ತಾಲ್ಲೂಕಿನ ಗುರುಪುರ ಕೆರೆ ಬಳಿ ಜಾನುವಾರುಗಳನ್ನು ಮೇಯಲು ಕಟ್ಟಿ ಹಾಕಿದ್ದ ವೇಳೆ ಹುಲಿ ಏಕಾಏಕಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಳೇವಾರಂಚಿ ಗ್ರಾಮದ ಮುನ್ನಾ ಎಂಬುವರಿಗೆ ಸೇರಿದ ಎತ್ತು ಮೃತಪಟ್ಟಿದೆ. ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಟ್ರ್ಯಾಕ್ಟರ್‌ನಲ್ಲಿ ಎತ್ತಿನ ಶವವನ್ನಿಟ್ಟುಕೊಂಡು ಪ್ರತಿಭಟನೆ ನಡೆಸಿದರು.ಗುರುಪುರದ ಹೆಚ್.ಡಿ. ಕೋಟೆ – ಹುಣಸೂರು ಮುಖ್ಯರಸ್ತೆಯಲ್ಲಿ ರಸ್ತೆ ತಡೆ ನಡೆಸಿದ ರೈತರು, ಕೂಡಲೇ ಹುಲಿಯನ್ನು ಸೆರೆಹಿಡಿಯುವಂತೆ ಆಗ್ರಹಿಸಿದರು. ಇದರಿಂದ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು.
ಅಂಗಟಹಳ್ಳಿಯಲ್ಲಿ ಹಸು ಸಾವು
ಇನ್ನೊಂದೆಡೆ, ತಾಲ್ಲೂಕಿನ ಅಂಗಟಹಳ್ಳಿ ಬಳಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ. ನಿಲುವಾಗಿಲು ಗ್ರಾಮದ ರೈತ ವೆಂಕಟೇಗೌಡ ಅವರಿಗೆ ಸೇರಿದ ಹಸು ಇದಾಗಿದ್ದು, ಜಮೀನಿನಲ್ಲಿ ಮೇಯುತ್ತಿದ್ದ ವೇಳೆ ಹುಲಿ ಹೊಂಚು ಹಾಕಿ ದಾಳಿ ಮಾಡಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪದೇ ಪದೇ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಹುಲಿಗಳನ್ನು ತಕ್ಷಣವೇ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ರೈತರು ಮತ್ತು ಸ್ಥಳೀಯ ನಿವಾಸಿಗಳು ತೀವ್ರವಾಗಿ ಒತ್ತಾಯಿಸಿದ್ದಾರೆ.
