ಮೈಸೂರು, ಡಿಸೆಂಬರ್ 26, 2025 : ಮೈಸೂರು ಅಂಬಾವಿಲಾಸ ಅರಮನೆ ಸಮೀಪ ನಿನ್ನೆ ರಾತ್ರಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಇಂದು ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಪರಿಸ್ಥಿತಿ ಕುರಿತು ವೈದ್ಯಾಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದ ಸಚಿವರು, ಸಂತ್ರಸ್ತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಆಸ್ಪತ್ರೆ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಇದೊಂದು ಅತ್ಯಂತ ದುರದೃಷ್ಟಕರ ಮತ್ತು ಆಕಸ್ಮಿಕ ಘಟನೆ ಎಂದು ಬೇಸರ ವ್ಯಕ್ತಪಡಿಸಿದರು. ಸ್ಫೋಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು. ಮೃತ ವ್ಯಕ್ತಿಯನ್ನು ಮೈಸೂರಿನ ನಿವಾಸಿ ಸಲೀಂ ಎಂದು ಗುರುತಿಸಲಾಗಿದ್ದು, ಅವರು ಜೀವನೋಪಾಯಕ್ಕಾಗಿ ಐಸ್ ಕ್ಯಾಂಡಿ ಹಾಗೂ ಬಲೂನ್ ಮಾರಾಟ ಮಾಡುತ್ತಿದ್ದರು. ಉಳಿದಂತೆ ಗಾಯಗೊಂಡ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ ಮಹದೇವಪ್ಪ ಅವರು, ಹೀಲಿಯಂ ಅನಿಲವನ್ನು ಪೌಡರ್ ಬಳಸಿ ತಯಾರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅನಾಹುತ ಸಂಭವಿಸಿರುವ ಸಾಧ್ಯತೆಯಿದೆ ಎಂದರು. ಇಂತಹ ಅಪಾಯಕಾರಿ ಚಟುವಟಿಕೆಗಳ ಬಗ್ಗೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಕಠಿಣ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿರುವುದಾಗಿ ಅವರು ತಿಳಿಸಿದರು. ಸದ್ಯ ಕೆ.ಆರ್. ಆಸ್ಪತ್ರೆಯ ವೈದ್ಯರ ತಂಡ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಶ್ರಮಿಸುತ್ತಿದೆ.
