ಮೈಸೂರು , ಡಿಸೆಂಬರ್ 26, 2025 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಪ್ರತಿ ವರ್ಷದಂತೆ ಈ ಬಾರಿಯೂ 2026ರ ಮೊದಲ ದಿನವಾದ ಜನವರಿ 1ರಂದು ಮೈಸೂರಿನ ವಿಜಯನಗರದಲ್ಲಿರುವ ಸುದರ್ಶನ ನರಸಿಂಹ ಕ್ಷೇತ್ರ ಎಂದೇ ಖ್ಯಾತಿಯಾಗಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಬರೊಬ್ಬರಿ 2 ಲಕ್ಷ ಲಡ್ಡುಗಳನ್ನು ಸಾರ್ವಜನಿಕರಿಗೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಬೃಹತ್ ಲಡ್ಡು ಕೈಂಕರ್ಯಕ್ಕಾಗಿ ಸುಮಾರು 100 ಮಂದಿ ನುರಿತ ಬಾಣಸಿಗರು ಹಗಲಿರುಳು ಶ್ರಮಿಸುತ್ತಿದ್ದಾರೆ. ಲಡ್ಡುಗಳ ತಯಾರಿಕೆಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 100 ಕ್ವಿಂಟಾಲ್ ಕಡಲೆ ಹಿಟ್ಟು, 200 ಕ್ವಿಂಟಾಲ್ ಸಕ್ಕರೆ, 1000 ಕೆಜಿ ಡೈಮಂಡ್ ಸಕ್ಕರೆ ಹಾಗೂ 2000 ಕೆಜಿ ಬೂರಾ ಸಕ್ಕರೆ. ತಲಾ 500 ಕೆಜಿ ಗೋಡಂಬಿ ಮತ್ತು ಒಣದ್ರಾಕ್ಷಿ, 250 ಕೆಜಿ ಬಾದಾಮಿ ಹಾಗೂ 50 ಕೆಜಿ ಪಿಸ್ತಾ. 50 ಕೆಜಿ ಏಲಕ್ಕಿ, 50 ಕೆಜಿ ಜಾಕಾಯಿ-ಜಾಪತ್ರೆ, 50 ಕೆಜಿ ಪಚ್ಚೆ ಕರ್ಪೂರ ಹಾಗೂ 200 ಕೆಜಿ ಲವಂಗ, 10,000 ಲೀಟರ್ ಉತ್ತಮ ಗುಣಮಟ್ಟದ ಖಾದ್ಯ ತೈಲವನ್ನು ಬಳಸಿ
ಡಾ. ರಾಜ್‌ಕುಮಾರ್ ಪ್ರೇರಣೆಯ ಈ ಕೈಂಕರ್ಯ
ಇನ್ನು, ಈ ಲಡ್ಡು ವಿತರಣಾ ಕಾರ್ಯಕ್ರಮದ ಹಿಂದೆ ಒಂದು ವಿಶೇಷ ಇತಿಹಾಸವಿದೆ. ಕನ್ನಡದ ಮೇರುನಟ ದಿವಂಗತ ಡಾ. ರಾಜ್‌ಕುಮಾರ್ ಅವರ ಪ್ರೇರಣೆಯಿಂದ ಈ ಸೇವೆ ಆರಂಭವಾಯಿತು. 1994ರ ಜನವರಿ 1ರಂದು ಕೇವಲ 1000 ಲಡ್ಡುಗಳ ವಿತರಣೆಯೊಂದಿಗೆ ಆರಂಭವಾದ ಈ ಸಂಪ್ರದಾಯ, ಇಂದು ಜನರ ಸಹಕಾರ ಮತ್ತು ಭಕ್ತಿಯಿಂದಾಗಿ 2 ಲಕ್ಷದ ಮೈಲಿಗಲ್ಲನ್ನು ತಲುಪಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ

ಈ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶ್ರೀ ಯೋಗಾನರಸಿಂಹಸ್ವಾಮಿ ದೇಗುಲದ ಮುಖ್ಯಸ್ಥರಾದ ಪ್ರೊಫೆಸರ್ ಭಾಷ್ಯಂ ಸ್ವಾಮೀಜಿ ಅವರು ಮಾತನಾಡಿ, ಸಾರ್ವಜನಿಕರು ಶಿಸ್ತುಬದ್ಧವಾಗಿ ಆಗಮಿಸಿ ಪ್ರಸಾದ ಸ್ವೀಕರಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ದೇಗುಲದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್, ಡಾ. ರಾಜ್‌ಕುಮಾರ್ ಅವರ ಪುತ್ರಿ ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಉಪಸ್ಥಿತರಿದ್ದರು.
ನೂತನ ವರ್ಷಾರಂಭ ಜನವರಿ 1ರ ಮುಂಜಾನೆಯಿಂದಲೇ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಆರಂಭವಾಗಲಿದ್ದು, ದೇಗುಲದ ವತಿಯಿಂದ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.
