ಮೈಸೂರು, ಡಿಸೆಂಬರ್ 25, 2025 : ಸ್ಯಾಂಡಲ್‌ವುಡ್‌ನ ಇಬ್ಬರು ಧ್ರುವತಾರೆಗಳಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಸಿನಿಮಾಗಳು ತೆರೆಕಂಡಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

‘ಮಾರ್ಕ್’ ಚಿತ್ರಕ್ಕೆ ಫುಲ್ ಮಾರ್ಕ್ಸ್: 2 ಕ್ವಿಂಟಾಲ್ ಬಿರಿಯಾನಿ ವಿತರಣೆ
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಮಾರ್ಕ್’ ಸಿನಿಮಾ ಬಿಡುಗಡೆಯಾದ ಹಿನ್ನೆಲೆಯಲ್ಲಿ ಮೈಸೂರಿನ ಸಂಗಮ್ ಚಿತ್ರಮಂದಿರದ ಮುಂಭಾಗ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ನೆಚ್ಚಿನ ನಟನ ಸಿನಿಮಾ ಬಿಡುಗಡೆಯ ಖುಷಿಯಲ್ಲಿ ಅಭಿಮಾನಿಗಳು ಬರೋಬ್ಬರಿ 2 ಕ್ವಿಂಟಾಲ್ ಚಿಕನ್ ಬಿರಿಯಾನಿಯನ್ನು ಸಾರ್ವಜನಿಕರಿಗೆ ಹಾಗೂ ಅಭಿಮಾನಿಗಳಿಗೆ ವಿತರಿಸುವ ಮೂಲಕ ವಿಭಿನ್ನವಾಗಿ ಸಂಭ್ರಮಿಸಿದರು.ಚಿತ್ರಮಂದಿರದ ಎದುರು ಕಿಚ್ಚನ ಪರ ಘೋಷಣೆಗಳನ್ನು ಕೂಗುತ್ತಾ, ಪಟಾಕಿ ಸಿಡಿಸಿ ಫ್ಯಾನ್ಸ್ ಅದ್ದೂರಿ ಸ್ವಾಗತ ಕೋರಿದರು. ಅಲ್ಲದೆ “ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ, ಕಿಚ್ಚನ ಅಭಿನಯ ಫುಲ್ ಸೂಪರ್” ಎಂದು ಪ್ರೇಕ್ಷಕರು ‘ಪ್ರತಿನಿಧಿ ನ್ಯೂಸ್’ ಜೊತೆ ಮಾತನಾಡುತ್ತಾ ಚಿತ್ರಕ್ಕೆ ‘ಫುಲ್ ಮಾರ್ಕ್ಸ್’ ನೀಡಿದ್ದಾರೆ.
ಶಿವಣ್ಣನ ’45’ ಚಿತ್ರಕ್ಕೂ ಅದ್ಭುತ ಪ್ರತಿಕ್ರಿಯೆ

ಇನ್ನೊಂದೆಡೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅಭಿನಯದ ’45’ ಸಿನಿಮಾ ಕೂಡ ಮೈಸೂರಿನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಶಿವಣ್ಣನ ಅಮೋಘ ನಟನೆಯನ್ನು ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳಿಗೆ ಪ್ರೇಕ್ಷಕರು ಮುಗಿಬೀಳುತ್ತಿದ್ದಾರೆ. ಸೆಂಚುರಿ ಸ್ಟಾರ್ ಅವರ ಎನರ್ಜಿ ಹಾಗೂ ನಟನೆಗೆ ಸಿನಿ ರಸಿಕರು ಮನಸೋತಿದ್ದಾರೆ. ಈ ಕುರಿತು ‘ಪ್ರತಿನಿಧಿ ನ್ಯೂಸ್’ ಜೊತೆ ಹಂಚಿಕೊಂಡ ಪ್ರೇಕ್ಷಕರು, ಶಿವಣ್ಣನ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಮೈಸೂರಿನಲ್ಲಿ ಸ್ಟಾರ್ ನಟರ ಚಿತ್ರಗಳ ಅಬ್ಬರ ಜೋರಾಗಿದ್ದು, ಗಾಂಧಿನಗರದ ಕಳೆ ಸಾಂಸ್ಕೃತಿಕ ನಗರಿಯಲ್ಲೂ ಮೇಳೈಸಿದೆ.
