ಮೈಸೂರು, ಡಿಸೆಂಬರ್ 24, 2025 : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಅಹಿಂದ ಮುಖಂಡರು ಬೃಹತ್ ಶಕ್ತಿ ಪ್ರದರ್ಶನಕ್ಕೆ ದಿನಾಂಕ ನಿಗದಿಪಡಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ಬರುವ ಜನವರಿ 25 ರಂದು ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಬೃಹತ್ ‘ಅಹಿಂದ ಸಮಾವೇಶ’ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತು ಅಹಿಂದ ಮುಖಂಡ ಕೆ.ಎಸ್. ಶಿವರಾಮ್ ಅಧಿಕೃತವಾಗಿ ದಿನಾಂಕ ಘೋಷಣೆ ಮಾಡಿದ್ದು, ಕಾಂಗ್ರೆಸ್ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ರವಾನಿಸಲು ಸಿದ್ಧತೆ ನಡೆಸಿದ್ದಾರೆ.

ಕರ್ನಾಟಕದ ರಾಜಕೀಯ ಸ್ಥಿತಿಗತಿ ಮತ್ತೊಂದು ರಾಜಸ್ಥಾನದಂತೆ ಆಗಬಾರದು ಎಂಬ ಎಚ್ಚರಿಕೆಯನ್ನು ಹೈಕಮಾಂಡ್‌ಗೆ ನೀಡಲು ಮುಂದಾಗಿರುವ ಮುಖಂಡರು, ಸಿದ್ದರಾಮಯ್ಯ ಅವರ ಶಕ್ತಿಯನ್ನು ದೆಹಲಿ ನಾಯಕರಿಗೆ ಮನವರಿಕೆ ಮಾಡಿಕೊಡುವುದು ಸಮಾವೇಶದ ಪ್ರಮುಖ ಉದ್ದೇಶ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡಬಾರದು ಎಂಬ ಒಕ್ಕೊರಲ ಒತ್ತಾಯ ಕೇಳಿಬಂದಿದೆ. ಸುಮಾರು 25 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸುವ ಗುರಿ ಹೊಂದಿರುವ ಈ ಸಮಾವೇಶದ ಮೂಲಕ, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ತಡೆಹಿಡಿಯುವ ಷಡ್ಯಂತ್ರ ನಡೆಯುತ್ತಿದೆ ಎಂದು ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಕೆ.ಎಸ್. ಶಿವರಾಮ್, ರಾಜ್ಯದಲ್ಲಿ ಶೇ. 65 ರಷ್ಟಿರುವ ಅಹಿಂದ ಮತದಾರರ ಬೆಂಬಲವಿಲ್ಲದೆ ಯಾರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಕನಿಷ್ಠ ಗ್ರಾಮ ಪಂಚಾಯತ್ ಸದಸ್ಯರಾಗಲೂ ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಕಾಂಗ್ರೆಸ್‌ನ ಕೆಲವು ಶಾಸಕರೇ ಸಿದ್ದರಾಮಯ್ಯ ಅವರ ಬಗ್ಗೆ ಅಪಸ್ವರ ಎತ್ತುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸಿದರೆ ಇಡೀ ಅಹಿಂದ ವರ್ಗವೇ ವೀಕ್ ಆಗುತ್ತದೆ ಎಂಬುದು ವಿರೋಧಿಗಳ ಪ್ಲಾನ್ ಆಗಿದೆ ಎಂದು ಎಚ್ಚರಿಸಿದರು.
“ನಾವು ಡಿ.ಕೆ. ಶಿವಕುಮಾರ್ ಅವರ ವಿರೋಧಿಗಳಲ್ಲ ಅಥವಾ ಯಾರ ವಿರುದ್ಧವಾಗಿಯೂ ಈ ಸಮಾವೇಶ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರು ಈ ರಾಜ್ಯಕ್ಕೆ ಎಷ್ಟು ಅನಿವಾರ್ಯ ಎಂಬುದನ್ನು ತಿಳಿಸಲು ಮತ್ತು ನಮ್ಮ ಸಮುದಾಯಗಳ ಹಕ್ಕೊತ್ತಾಯಕ್ಕಾಗಿ ಈ ವೇದಿಕೆ ಸಜ್ಜುಗೊಳಿಸುತ್ತಿದ್ದೇವೆ” ಎಂದು ಶಿವರಾಮ್ ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂಬ ಒತ್ತಾಯದೊಂದಿಗೆ, ಅಹಿಂದ ಮತಗಳು ಸದಾ ಕಾಂಗ್ರೆಸ್ ಬೆನ್ನಿಗೆ ಇವೆ ಎಂಬುದನ್ನು ಈ ಸಮಾವೇಶದ ಮೂಲಕ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.
