ಮೈಸೂರು, ಡಿಸೆಂಬರ್ 24, 2025 : ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ದ್ವೇಷ ಭಾಷಣ ತಡೆ ಕಾಯ್ದೆ ವಿರೋಧಿಸಿ ಮೈಸೂರಿನಲ್ಲಿ ಇಂದು ಕೂಡ ಪ್ರತಿಭಟನೆ ಮುಂದುವರಿದಿದೆ. ಬಿಜೆಪಿಯ ಕೃಷ್ಣರಾಜ ಮಂಡಲದ ವತಿಯಿಂದ ಅಗ್ರಹಾರದ ನೂರೊಂದು ಗಣಪತಿ ದೇಗುಲದ ಬಳಿ ಪ್ರತಿಭಟನೆ ಮಾಡಲಾಗಿದೆ.

ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಾಕಾರರು, ದ್ವೇಷ ಭಾಷಣ ತಡೆ ಮಸೂದೆಯ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಶಾಸಕ ಶ್ರೀವತ್ಸ ಮಾತನಾಡಿ, ರಾಜ್ಯ ಸರ್ಕಾರ ದ್ವೇಷ ಭಾಷಣ ತಡೆ ಕಾಯ್ದೆಯನ್ನು ಜಾರಿಗೊಳಿಸುವ ನೆಪದಲ್ಲಿ ಸಂವಿಧಾನಬದ್ದವಾದ ಮಾತನಾಡುವ ಹಕ್ಕನ್ನು ಕಸಿದುಕೊಳ್ಳಲು ಹೊರಟಿದೆ. ಇದು ಸಂವಿಧಾನ ಬಾಹಿರವಾದ ಕ್ರಮವಾಗಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ, ಮಹಾನಗರ ಪಾಲಿಕೆ ಮಾಜಿ ಸದಸ್ಯರು ಹಾಗು ಸ್ಥಳೀಯ ಮುಖಂಡರು ಭಾಗಿಯಾಗಿದ್ದರು.
