ಮೈಸೂರು, ಡಿಸೆಂಬರ್ 23, 2025 : ರಾಜ್ಯ ಸರ್ಕಾರವು ದ್ವೇಷ ಭಾಷಣ (Hate Speech) ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿರುವ ನಿರ್ಧಾರವನ್ನು ಖಂಡಿಸಿ, ಇಂದು ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿಯ ಆವರಣದಲ್ಲಿರುವ ಮಿನಿ ವಿಧಾನಸೌಧದ ಮುಂಭಾಗ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಈ ನಿರ್ಧಾರವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.
ಬಿಜೆಪಿ ನಗರಾಧ್ಯಕ್ಷರಾದ ಎಲ್. ನಾಗೇಂದ್ರ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.ಪ್ರತಿಭಟನೆಯಲ್ಲಿ ನಗರಪಾಲಿಕೆಯ ಮಾಜಿ ಸದಸ್ಯರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಕೂಡಲೇ ದ್ವೇಷ ಭಾಷಣ ಕಾಯ್ದೆ ಜಾರಿಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಹಾಗೂ “ಕಾಂಗ್ರೆಸ್ ಸರ್ಕಾರವು ಒಂದು ವರ್ಗದ ಓಲೈಕೆಗಾಗಿ ಈ ಕಾಯ್ದೆಯನ್ನು ತರುತ್ತಿದೆ. ಇದು ಕೇವಲ ವಿರೋಧ ಪಕ್ಷದವರನ್ನು ಗುರಿ ಮಾಡಲು ಬಳಸುವ ಅಸ್ತ್ರವಾಗಿದೆ,” ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಆರೋಪಿಸಿದರು.
ಪ್ರತಿಭಟನೆಯ ನಂತರ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
