ಟೆಕ್ಸಾಸ್, ಡಿಸೆಂಬರ್ 23, 2025: ಮೆಕ್ಸಿಕನ್ ನೌಕಾಪಡೆಗೆ ಸೇರಿದ ಸಣ್ಣ ವಿಮಾನವೊಂದು ವೈದ್ಯಕೀಯ ತುರ್ತು ಕಾರ್ಯಾಚರಣೆಯಲ್ಲಿದ್ದಾಗ ಟೆಕ್ಸಾಸ್‌ನ ಗಾಲ್ವೆಸ್ಟನ್ ಸಮುದ್ರ ಕರಾವಳಿಯ ಬಳಿ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಕೋಸ್ಟ್ ಗಾರ್ಡ್ ಪೆಟಿ ಆಫೀಸರ್ ಲ್ಯೂಕ್ ಬೇಕರ್ ಖಚಿತಪಡಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಹೂಸ್ಟನ್‌ನ ಆಗ್ನೇಯಕ್ಕೆ ಸುಮಾರು 80.5 ಕಿಲೋಮೀಟರ್ ದೂರದಲ್ಲಿ ಈ ಘಟನೆ ಸಂಭವಿಸಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರಿಗಾಗಿ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.
ವಿಮಾನದಲ್ಲಿ ನಾಲ್ವರು ನೌಕಾಪಡೆಯ ಅಧಿಕಾರಿಗಳು ಹಾಗೂ ಮಗು ಸೇರಿದಂತೆ ನಾಲ್ವರು ನಾಗರಿಕರು ಇದ್ದರೆಂದು ತಿಳಿದುಬಂದಿದೆ. ಯುವ ರೋಗಿಯೊಬ್ಬರನ್ನು ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಮೆಕ್ಸಿಕೊದ ನೌಕಾಪಡೆಯು ಸುದ್ದಿಸಂಸ್ಥೆ ಅಸೋಸಿಯೇಟೆಡ್ ಪ್ರೆಸ್‌ಗೆ ಈ ಕುರಿತು ಮಾಹಿತಿ ನೀಡಿದ್ದು, ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ನಿಖರ ಅಂಕಿಅಂಶಗಳನ್ನು ಕಲೆಹಾಕಲಾಗುತ್ತಿದೆ ಎಂದು ತಿಳಿಸಿದೆ. ಸದ್ಯ ಘಟನಾ ಸ್ಥಳದಲ್ಲಿ ತನಿಖೆ ಮುಂದುವರಿದಿದ್ದು, ಅಪಘಾತಕ್ಕೆ ನಿಖರವಾದ ಕಾರಣವೇನೆಂಬುದು ಇನ್ನು ತಿಳಿಯಬೇಕಿದೆ.
