ಮೈಸೂರು, ಡಿಸೆಂಬರ್ 20, 2025 : ಮೈಸೂರಿನ ಹಿನಕಲ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಅಡಮಾನವಿಟ್ಟಿದ್ದ ಚಿನ್ನದ ತೂಕದಲ್ಲಿ ಭಾರಿ ಪ್ರಮಾಣದ ಮೋಸ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಇದರಿಂದ ವಂಚನೆಗೆ ಒಳಗಾಗಿರುವ ನೂರಾರು ಗ್ರಾಹಕರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

ತಾವು ನಂಬಿಕೆಯಿಂದ ಬ್ಯಾಂಕ್‌ನಲ್ಲಿಟ್ಟಿದ್ದ ಒಡವೆಗಳನ್ನು ವಾಪಸ್ ಪಡೆಯುವ ಸಂದರ್ಭದಲ್ಲಿ ತೂಕದಲ್ಲಿ ಭಾರಿ ವ್ಯತ್ಯಾಸವಿರುವುದನ್ನು ಕಂಡು ಹಿಡಿದಿರುವ ಜನರು, ನ್ಯಾಯಕ್ಕಾಗಿ ಪ್ರತಿನಿತ್ಯ ಬ್ಯಾಂಕ್‌ಗೆ ಅಲೆಯುತ್ತಿದ್ದಾರೆ. ಒಡವೆಗಳನ್ನು ಅಡವಿಡುವ ಸಂದರ್ಭದಲ್ಲಿ ಚಿನ್ನದ ತೂಕ ಮಾಡುತ್ತಿದ್ದ ಅಕ್ಕಸಾಲಿಗ ಅಶ್ವಿನ್ ಎಂಬಾತನೇ ನಮಗೆಲ್ಲಾ ಮೋಸ ಮಾಡಿದ್ದಾನೆ ಎಂದು ಗ್ರಾಹಕರು ಗಂಭೀರವಾಗಿ ದೂರುತ್ತಿದ್ದಾರೆ. ಕೇವಲ ಅಡವಿಟ್ಟ ಚಿನ್ನ ಮಾತ್ರವಲ್ಲದೆ, ಬ್ಯಾಂಕ್‌ನ ಲಾಕರ್‌ನಲ್ಲಿ ಸುರಕ್ಷಿತವಾಗಿ ಇರಿಸಿದ್ದ ಚಿನ್ನದ ತೂಕದಲ್ಲೂ ವ್ಯತ್ಯಾಸವಾಗಿರುವುದು ಜನರ ಆತಂಕವನ್ನು ಇಮ್ಮಡಿಗೊಳಿಸಿದೆ.
ಈ ಹಿನ್ನೆಲೆಯಲ್ಲಿ ನೊಂದ ಗ್ರಾಹಕರು ಬ್ಯಾಂಕ್ ಮುಂಭಾಗ ಜಮಾಯಿಸಿ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ, ಇಷ್ಟೆಲ್ಲಾ ಗದ್ದಲ ನಡೆಯುತ್ತಿದ್ದರೂ ಬ್ಯಾಂಕ್‌ನ ಸಿಬ್ಬಂದಿ ವರ್ಗ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದೇ ವೇಳೆ ಬ್ಯಾಂಕ್‌ನಲ್ಲಿ ಅಕ್ಕಸಾಲಿಗನಾಗಿದ್ದ ಅಶ್ವಿನ್‌ನ ಐಶಾರಾಮಿ ಜೀವನದ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಬ್ಯಾಂಕ್‌ನಲ್ಲಿ ಸಾಮಾನ್ಯ ಕೆಲಸ ಮಾಡಿಕೊಂಡಿದ್ದ ಅಶ್ವಿನ್, ಅತ್ಯಂತ ದುಬಾರಿ ಬೆಲೆಯ ಐಶಾರಾಮಿ ಕಾರುಗಳನ್ನು ಖರೀದಿಸಿ ಓಡಾಡುತ್ತಿದ್ದನು. ಅಷ್ಟೇ ಅಲ್ಲದೆ, ಆಗಾಗ್ಗೆ ದೂರದ ಪ್ರವಾಸಿ ತಾಣಗಳಿಗೆ ಮೋಜು ಮಸ್ತಿ ಮಾಡಲು ತೆರಳುತ್ತಿದ್ದ ಈತ, ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ನಗರದ ಪ್ರತಿಷ್ಠಿತ ಹೋಟೆಲ್‌ಗಳಿಗೆ ಹೋಗುತ್ತಿದ್ದ ಎನ್ನಲಾಗಿದೆ. ಗ್ರಾಹಕರ ಕಷ್ಟದ ಹಣದಲ್ಲಿ ಈತ ಇಂತಹ ಅದ್ದೂರಿ ಜೀವನ ನಡೆಸುತ್ತಿದ್ದ ಎಂದು ವಂಚನೆಗೆ ಒಳಗಾದವರು ನೇರವಾಗಿ ಆರೋಪಿಸುತ್ತಿದ್ದಾರೆ. ಕಳೆದುಹೋದ ತಮ್ಮ ಚಿನ್ನವನ್ನು ಮರಳಿ ಕೊಡಿಸಿ ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಗ್ರಾಹಕರು ಸಂಬಂಧಪಟ್ಟ ಅಧಿಕಾರಿಗಳನ್ನು ಅಂಗಲಾಚುತ್ತಿದ್ದಾರೆ.
