ಮೈಸೂರು, ಡಿಸೆಂಬರ್ 17, : ವಿಶ್ವದಾದ್ಯಂತ 2026ರ ನೂತನ ವರ್ಷವನ್ನು ಬರಮಾಡಿಕೊಳ್ಳಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಸಂಭ್ರಮಕ್ಕೆ ಮೈದೂರಿ ನಿಂತಿರುವ ಸಾಂಸ್ಕೃತಿಕ ನಗರಿ ಮೈಸೂರು, ಪ್ರವಾಸಿಗರಿಗಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಪ್ರತಿವರ್ಷದಂತೆ ಭವ್ಯ ‘ಫಲಪುಷ್ಪ ಪ್ರದರ್ಶನ’ ವನ್ನು ಆಯೋಜಿಸಲಾಗಿದೆ.

ಡಿಸೆಂಬರ್ 21 ರಿಂದ ಜನವರಿ 1, 2026 ರವರೆಗೆ ಪ್ರತಿದಿನ ಬೆಳಿಗ್ಗೆ 10:00 ರಿಂದ ರಾತ್ರಿ 9:00 ಗಂಟೆಯವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗದೆ. ಲಕ್ಷಾಂತರ ವೈವಿಧ್ಯಮಯ ಹೂವುಗಳಿಂದ ಸೃಜಿಸಲಾದ ಶೃಂಗೇರಿ ಶಾರದಾಂಬೆ ದೇಗುಲದ ಕಲಾಕೃತಿ ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷವಾಗಿದೆ.

ಹಾಗೂ ಈ ಬಾರಿಯ ಪುಷ್ಪ ಪ್ರದರ್ಶನ ಕೇವಲ ಸೌಂದರ್ಯಕ್ಕೆ ಮಾತ್ರ ಸೀಮಿತವಾಗಿಲ್ಲದೆ, ಇತ್ತೀಚೆಗೆ ನಿಧನರಾದ ಪರಿಸರ ಪ್ರೇಮಿ, ವೃಕ್ಷಮಾತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ವಿಶೇಷ ನಮನ ಸಲ್ಲಿಸಲಾಗುತ್ತಿದೆ. ಅವರೊಂದಿಗೆ ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಮುನ್ನುಡಿ ಬರೆದ ಮುಮ್ಮಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಹಲವು ಗಣ್ಯರ ಹೂವಿನ ಭಾವಚಿತ್ರಗಳು ಪ್ರದರ್ಶನದ ಕಳೆ ಹೆಚ್ಚಿಸಲಿವೆ.
